ಗದಗ: ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆಗೆ ಆದ್ಯತೆ ವಹಿಸಬೇಕು. ಅಲ್ಲದೇ ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಪ್ರತಿ ದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಬೆಳಗ್ಗೆ ವಾರ್ಡ್ ವಾರು ನೀರು ಪೂರೈಕೆಗೆ ವಾಲ್ ಮನ್ ಗಳು ಮುಂದಾಗಬೇಕು. ನಗರಸಭೆಯಿಂದ ಸದ್ಯ ಕಾರ್ಯ ನಿರ್ವಹಿಸುತ್ತಿರುವ ವಾಲ್ಮಾನ್ ಗಳು ಸೂಪರ್ವೈಸ್‌ರಗಳನ್ನು ಬದಲಾವಣೆ ಮಾಡಬೇಕು. ಅವರಿಗೆ ಪ್ರತ್ಯೇಕ ಬೀದಿ, ವಾರ್ಡ್ ಗಳ ಮರುಹಂಚಿಕೆ ಮಾಡಿ ಸಮರ್ಪಕ ನೀರು ಪೂರೈಕೆಗೆ ಇರುವ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರು ಮುಂದಾಗಬೇಕು ಎಂದು ಸೂಚನೆ ನೀಡಿದರು.
ನಾವೆಲ್ಲರೂ ನೀರು ಪೂರೈಕೆ ಮಾಡುವ ವಾಲ್ಮೆನ್ ಮೇಲೆ ವಿಶ್ವಾಸವಿಟ್ಟು ಗಮನಿಸೋಣ, ಮುಂದಿನ 100 ದಿವಸದೊಳಗೆ ಸಮರ್ಪಕ ನೀರಿನ ವ್ಯವಸ್ಥೆ ಆಗುವಂತೆ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ. ನೀರು ಪೂರೈಕೆ ಕುರಿತಂತೆ ನ.1 ರಂದು ಮತ್ತೆ ನಾವೆಲ್ಲರೂ ಸೇರೋಣ, ಆಗ ನೀರಿನ ಸಮಸ್ಯೆ ಪೂರೈಕೆ ಸಂಪೂರ್ಣ ನಿವಾರಣೆಯಾಗಿರಬೇಕು ಎಂದರು.ಅವಳಿ ನಗರಕ್ಕೆ ನೀರು ಪೂರೈಕೆಗಾಗಿಯೇ ಪ್ರತ್ಯೇಕ ಒಬ್ಬ ಎಂಜಿನಿಯರ್ ನೇಮಕ ಮಾಡಿ ನೀರು ಪೂರೈಕೆ ಸರಳೀಕರಣಗೊಳಿಸುವಂತೆ, ಅಲ್ಲದೆ ಪೈಪ್, ವಾಲ್ ನಿಂದ ಪೋಲಾಗುವ ನೀರನ್ನು ತಡೆಯಲು ಶೀಘ್ರ ದುರಸ್ತಿ ಕೈಗೊಳ್ಳಲು ಸೂಚಿಸಿದರು.
ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ನಗರಸಭೆ ಪೌರಾಯುಕ್ತರು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸಮರ್ಪಕ ನೀರು ಪೂರೈಕೆ ಆಗುತ್ತಿರುವ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇಲುಸ್ತುವಾರಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮೊದಲು ದಿಬ್ಬದಲ್ಲಿರುವ ಮನೆಗಳಿಗೆ ನೀರಿನ ಪೂರೈಕೆ ಮಾಡಬೇಕು ನಂತರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಪೂರೈಕೆ ಆಗುವಂತೆ ನಿಗ ವಹಿಸಬೇಕು ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಪ್ರಭು ಬುರುಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಜಿಪಂ ಸಿಇಒ ಭರತ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ನಗರಸಭೆಯ ಅಧಿಕಾರಿಗಳು, ವಾಲ್ಮಾನ್‌ಗಳು ಸೂಪರ್ ವೈಸರ್‌ಗಳು ಇದ್ದರು.