ಮಕ್ಕಳ ಆರಕ್ಷಣೆಗೆ ಆದ್ಯತೆ ನೀಡಿ

KannadaprabhaNewsNetwork | Published : Apr 16, 2025 12:34 AM

ಸಾರಾಂಶ

ಮಕ್ಕಳು ರಜೆಯ ದಿನಗಳಲ್ಲಿ ಕ್ರೀಡಾ ಚಟುವಟಿಕೆ ಮತ್ತು ಈಜು ಕಲಿಯಲು ಅಥವಾ ಈಜಾಡಲು ಹೋಗುವ ಸಂದರ್ಭಗಳು ಅಧಿಕವಾಗಿದ್ದು, ವಿದ್ಯುತ್‌ ಅಪಘಾತದಿಂದ ಹಾಗೂ ನೀರಿನಲ್ಲಿ ಉಸಿರುಗಟ್ಟಿ ಜೀವ ಕಳೆದುಕೊಳ್ಳುವ ಪ್ರಸಂಗಗಳು ಜರುಗುತ್ತಿವೆ.

ಕೊಪ್ಪಳ:

ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿನ ಇಬ್ಬರು ಮಕ್ಕಳು ಕಾಲುವೆಯಲ್ಲಿ ಈಜಾಡಲು ತೆರಳಿದ ವೇಳೆ ವಿದ್ಯುತ್‌ ತಗುಲಿ ಮೃತರಾದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಮೃತ ಬಾಲಕರ ಮನೆಗೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು.

ಏ. 8ರಂದು ಹೊಸಳ್ಳಿ ಗ್ರಾಮದ ಮಕ್ಕಳು ಮೃತಪಟ್ಟಿದ್ದರು. ಮಂಗಳವಾರ ಶೇಖರಗೌಡ ಜಿ. ರಾಮತ್ನಾಳ ಘಟನಾ ಸ್ಥಳ ಪರಿಶೀಲಿಸಿದರು. ಅಲ್ಲದೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಕ್ಕಳ ರಕ್ಷಣೆ ಕುರಿತು ಚರ್ಚಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಜೀವ ಅತ್ಯಮೂಲ್ಯವಾದದ್ದು, ಮಕ್ಕಳು ಬೇಸಿಗೆ ರಜೆ ಅನುಭವಿಸುವುದರೊಂದಿಗೆ ಸುರಕ್ಷಿತವಾಗಿರುವುದು ಅತ್ಯವಶ್ಯಕ. ಬೇಸಿಗೆ ರಜೆ ಅವಧಿಗಳು ಈಗಾಗಲೇ ಆರಂಭಗೊಂಡಿವೆ. ಮಕ್ಕಳು ರಜೆಯ ದಿನಗಳಲ್ಲಿ ಕ್ರೀಡಾ ಚಟುವಟಿಕೆ ಮತ್ತು ಈಜು ಕಲಿಯಲು ಅಥವಾ ಈಜಾಡಲು ಹೋಗುವ ಸಂದರ್ಭಗಳು ಅಧಿಕವಾಗಿದ್ದು, ವಿದ್ಯುತ್‌ ಅಪಘಾತದಿಂದ ಹಾಗೂ ನೀರಿನಲ್ಲಿ ಉಸಿರುಗಟ್ಟಿ ಜೀವ ಕಳೆದುಕೊಳ್ಳುವ ಪ್ರಸಂಗಗಳು ಜರುಗುತ್ತಿವೆ. ಈ ರೀತಿಯ ಘಟನೆಗಳು ಮರುಕಳಿಸದಂತೆ ಮಕ್ಕಳಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ಗ್ರಾಪಂ ವ್ಯಾಪ್ತಿಯಲ್ಲಿರುವ ನದಿ, ಕಾಲುವೆ, ಹಳ್ಳ ಮತ್ತು ಬಾವಿಗಳ ಹತ್ತಿರ “ನೀರು ಆಳವಿದೆ, ಎಚ್ಚರಿಕೆ” ಎಂಬ ಫಲಕ ಅಳವಡಿಸುವುದು, ಸ್ಥಳೀಯ ಜೀವರಕ್ಷಕ ಸಾಧನಗಳಾದ ನೀರಿನ ಟ್ಯೂಬ್, ಹಗ್ಗ ತೇಲಿ ಅಳವಡಿಸುವ ಮೂಲಕ ಮಕ್ಕಳ ಹಾಗೂ ಮಾನವ ಜೀವಗಳನ್ನು ರಕ್ಷಿಸಬಹುದಾಗಿದೆ. ಈ ಕುರಿತು ಕ್ರಮವಹಿಸಬೇಕು. ಮಕ್ಕಳ ರಕ್ಷಣೆ ನಮ್ಮೆಲ್ಲರ ಮತ್ತು ಸಮುದಾಯದ ಹೊಣೆಯಾಗಿದ್ದು, ಎಲ್ಲರೂ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಹೊಸಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ ಛಲವಾದಿ, ಕೊಪ್ಪಳ ಪ್ರಭಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಪ್ಪ, ಮುನಿರಾಬಾದ್ ಆರಕ್ಷಕ ಉಪ-ನಿರೀಕ್ಷಕ ಸುನೀಲ ಎಚ್., ಕೊಪ್ಪಳ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ, ಹೊಸಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಜಿ. ಹಾಗೂ ಕರ್ನಾಟಕ ನೀರಾವರಿ ನಿಗಮ ಮುನಿರಾಬಾದ್ ಉಪವಿಭಾಗದ ಅಧಿಕಾರಿಗಳು ಇದ್ದರು.

Share this article