ಹೊಸಪೇಟೆ: ಇಂದಿನ ದಿನಗಳಲ್ಲಿ ವ್ಯವಹಾರ ಸೇರಿದಂತೆ ಹಲವು ಚಟುವಟಿಕೆ ಮೊಬೈಲ್ ಮೂಲಕವೇ ನಡೆಯುತ್ತಿವೆ. ವರ್ಚುವಲ್ ಕಲಿಕೆ ಹೆಚ್ಚಾಗುತ್ತಿದ್ದು, ನೇರ ಮುಖಾಮುಖಿ ಸಂವಹನ ಕಡಿಮೆಯಾಗುತ್ತಿದೆ. ಇದರಿಂದ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿರುವುದು ಸೇರಿದಂತೆ ಒಟ್ಟಾರೆ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳು ಸಂಭವಿಸುತ್ತಿವೆ ಎಂದು ಲೇಖಕಿ ಶಮಂತ ಡಿ.ಎಸ್. ತಿಳಿಸಿದರು.
ಬೋಧಕರು ಸದಾ ಕಲಿಯುವ ಮನೋಭಾವ ಹೊಂದಿರಬೇಕು. ಕೃತಕ ಬುದ್ಧಿಮತ್ತೆಯ (ಎಐ) ಬೆಳವಣಿಗೆಯ ಹಿನ್ನೆಲೆ ಔಪಚಾರಿಕ ಶಿಕ್ಷಣ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಅಗತ್ಯದ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಸಾಕ್ಷರತೆ ಮತ್ತು ಶಿಕ್ಷಣದ ನಡುವಿನ ವ್ಯತ್ಯಾಸ ಅರಿಯುವುದು ಮುಖ್ಯ. ವರ್ಚುವಲ್ ಕಲಿಕೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ನೇರ ಸಂವಹನ ಕಡಿಮೆಯಾಗುತ್ತಿದ್ದು, ಜೀವನಶೈಲಿಯಲ್ಲಿಯೂ ಬದಲಾವಣೆಗಳು ಕಂಡುಬರುತ್ತಿವೆ ಎಂದು ತಿಳಿಸಿದರು.
ಸಂವಹನ ನಡೆಸುವವರು ವಿಷಯದ ಬಗ್ಗೆ ಸಮಗ್ರ ಜ್ಞಾನ ಹೊಂದಿರಬೇಕು. ಶಿಕ್ಷಕರು ಸೃಜನಶೀಲವಾಗಿ ಬೋಧಿಸುವುದರ ಜತೆಗೆ ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನ ಬೆಳೆಸಿಕೊಳ್ಳಬೇಕು. ಬೋಧನೆ, ಸಂಶೋಧನೆ ಮತ್ತು ಸಂವಹನದ ಸಮನ್ವಯವು ಯಾವುದೇ ಕ್ಷೇತ್ರದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವದ ಕುರಿತು ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಕೃತಕ ಬುದ್ಧಿಮತ್ತೆಯಿಂದ ಹಲವು ಪ್ರಯೋಜನಗಳಿರುವಂತೆಯೇ ಅಪಾಯ ಇವೆ. ಆದ್ದರಿಂದ ಎಐ ತಂತ್ರಜ್ಞಾನ ಬಳಸುವಾಗ ಅದರ ಸೂಕ್ತ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.