ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : May 24, 2026, 02:45 AM IST
ಚಿತ್ರ :  23ಎಂಡಿಕೆ2 : ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ನಡೆದ ಬಿತ್ತಿಪತ್ರ ಬಿಡುಗಡೆ ಮಾಡಲಾಯಿತು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಗಳ ಸುತ್ತಮುತ್ತ ತೆಂಗಿನ ಚಿಪ್ಪು, ಟಯರ್‌, ಹೂವಿನ ಕುಂಡದಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕು. ಪರಿಸರ ಸ್ವಚ್ಚತೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಆಗಾಗ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮನೆಗಳ ಸುತ್ತಮುತ್ತ ತೆಂಗಿನ ಚಿಪ್ಪು, ಟಯರ್‌, ಹೂವಿನ ಕುಂಡದಲ್ಲಿ ನೀರು ನಿಲ್ಲದಂತೆ ಗಮನ ಹರಿಸಬೇಕು. ಪರಿಸರ ಸ್ವಚ್ಚತೆಗೆ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ 2026ರ ಮಾರ್ಚ್‌ ವರೆಗೆ ಜಿಲ್ಲೆಯಲ್ಲಿ ಒಂದು ಪ್ರಕರಣ ಕಂಡುಬಂದಿದೆ. ಸೋಮವಾರಪೇಟೆ ತಾಲೂಕಿನ 16,860 ಮಂದಿಯ ರಕ್ತ ಪರೀಕ್ಷೆಯಲ್ಲಿ 1 ಪ್ರಕರಣ ಕಂಡುಬಂದಿದ್ದು, ಅವರು ಗುಣಮುಖರಾಗಿದ್ದಾರೆ ಎಂದರು.

ಮಲೇರಿಯಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಶೀಘ್ರ ಪತ್ತೆಗಾಗಿ ರಕ್ತ ಲೇಪನಗಳ ಪರೀಕ್ಷೆ, ಜಿಲ್ಲೆಯ ವಲಸಿಗರ ಮತ್ತು ಹೊರ ರಾಜ್ಯದ ವಲಸಿಗರ ಸಮೀಕ್ಷೆ, ವಿವಿಧ ಕಾರ್ಯಕ್ರಮ ಮೂಲಕ ಜಾಗೃತಿ ಮೂಡಿಸುವುದು, ಮಲೇರಿಯಾ ಪತ್ತೆಯಾದ ಗ್ರಾಮ/ ಪ್ರದೇಶಗಳಲ್ಲಿ ರಕ್ತ ಲೇಪ ಸಂಗ್ರಹ ಮತ್ತು ಐಇಸಿ ಚಟುವಟಿಕೆಗಳು, ಸ್ವಚ್ಛ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನು (ಗಪ್ಪಿ ಮತ್ತು ಗ್ಯಾಂಬೂಸಿಯ) ಬಿಡುಗಡೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್/ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ ಮೂಲಕ ಸೊಳ್ಳೆ ಉತ್ಪತ್ತಿ ತಾಣಗಳ ನಿವಾರಣೆ ಹಾಗೂ ಗ್ರಾಮ ನೈರ್ಮಲ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾಗಿ ಮುಚ್ಚುವುದು, ನಗರಾಭಿವೃದ್ಧಿ ಇಲಾಖೆಯಿಂದ ಫ್ಲೆಕ್ಸ್, ಪೋಸ್ಟರ್, ಬಿತ್ತಿಪತ್ರಗಳ ಮೂಲಕ ಮಾಹಿತಿ ನೀಡುವುದು, ನೀರು ಸರಬರಾಜು ಪೈಪ್‌ಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸುವುದು, ನೀರಾವರಿ ಇಲಾಖೆಯಿಂದ ನೀರಾವರಿ ಯೋಜನೆಗಳಡಿ ಕೆಲಸಕ್ಕಾಗಿ ಬರುವ ಕಾರ್ಮಿಕರ ಬಗ್ಗೆ ಮುಂಚಿತವಾಗಿ ಆರೋಗ್ಯ ಇಲಾಖೆಗೆ ತಿಳಿಸಲಾಗುವುದು ಎಂದು ಡಾ. ಸತೀಶ್ ಕುಮಾರ್ ತಿಳಿಸಿದರು. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಯಲು ಹೆಣ್ಣು ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಎಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಈ ಬಗ್ಗೆ ಹೆಚ್ಚು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, 14 ವರ್ಷ ವಯಸ್ಸಿನ ಬಾಲಕಿಯರು (ತಮ್ಮ 14ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರು ಆದರೆ ಇನ್ನೂ 15ನೇ ಹುಟ್ಟು ಹಬ್ಬ ಆಚರಿಸದವರು) ಲಸಿಕೆ ಪಡೆಯಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತ ಮಾಡದೇ ಇದ್ದಲ್ಲಿ 2030ರ ವೇಳೆಗೆ ಸರಿ ಸುಮಾರು 8 ಲಕ್ಷ ಹೊಸ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವಾರ್ಷಿಕವಾಗಿ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿರುವುದರಿಂದ ಜಿಲ್ಲೆಯಲ್ಲಿ ಹೆಚ್ಚು ಜಾಗೃತಿ ಅಗತ್ಯ ಇದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಈ ಬಗ್ಗೆ ವಿದ್ಯಾರ್ಥಿನಿಯರಿಗೆ ಒತ್ತಡ ಹೇರದೆ, ಅವರ ಮನ ಒಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಇಲಾಖಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ, ಪೋಷಕರಿಗೆ ಹಾಗೂ ಧರ್ಮಗುರುಗಳು ಸಮುದಾಯ ಬಾಂಧವರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.ಜಿಲ್ಲೆಯ 29 ಗ್ರಾಪಂನ್ನು ಟಿಬಿ ಮುಕ್ತಗೊಳಿಸಲಾಗಿದ್ದು, ಶೇಕಡವಾರು ಪ್ರಗತಿ ಸಾಧಿಸಲು ಹೆಚ್ಚಿನ ಜಾಗೃತಿ ಮೂಡಿಸಲಾಗಿದೆ. ಈ ನಿಟ್ಟಿನಲ್ಲಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದರು.

ಸಭೆಯಲ್ಲಿ ಮಿಷನ್ ಏಡ್ಸ್ ಸುರಕ್ಷಾ ಅಭಿಯಾನದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರಹ್ಮಾವರ ಜಿ ಎಮ್ ಶಾಲೆಯಲ್ಲಿ ರಾಜ್ಯ ತ್ರೋಬಾಲ್ ಆಯ್ಕೆ ಶಿಬಿರ
ಮೂಲ್ಕಿ: ನೂತನ ಪ್ಲಾಟ್‌ಫಾರ್ಮ್ ಲೋಕಾರ್ಪಣೆಗೆ ಸಿದ್ಧ