ರಾಮನಗರ: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ವಿಪರೀತ ಮಾನಸಿಕ ಒತ್ತಡ, ಕುಟುಂಬ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಪ್ರಭಾವದಿಂದಾಗಿ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಅವುಗಳನ್ನು ತಡೆಗಟ್ಟಲು ಕಾಲೇಜುಗಳಲ್ಲಿ ಯುವ ಜನರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕೆ. ಕುಮಾರ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಮಾನಸಿಕ ತೊಂದರೆ, ಆತಂಕ, ಖಿನ್ನತೆ ಅಥವಾ ವ್ಯಸನಕ್ಕೆ ಒಳಗಾದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಮನೋವಿಜ್ಞಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ದೇಹಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಸೂಕ್ತ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಧೂಮಪಾನ, ಮದ್ಯಪಾನ ಹಾಗೂ ಮುಖ್ಯವಾಗಿ ಮಾದಕ ವ್ಯಸನಗಳು ಯುವಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವ್ಯಸನಕ್ಕೆ ಒಳಗಾದ ಕೆಲವರು ಕುಟುಂಬ ಸದಸ್ಯರಿಂದ ದೂರವಾಗುವುದಲ್ಲದೆ ತಮ್ಮ ವರ್ತನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆ ಹಾಗೂ ಇದರಿಂದ ಕುಟುಂಬದಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಅದೇ ರೀತಿ ರೈತರು ಬೆಳೆ ನಷ್ಟ ನಿರೀಕ್ಷಿತ ಆದಾಯ ದೊರೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ಮಾನಸಿಕ ಸಮಸ್ಯೆಗಳಿದ್ದಲ್ಲಿ ಟೆಲಿಮನಸ್ ಸಹಾಯವಾಣಿ ಸಂಖ್ಯೆ - 14416 ಗೆ ಸಂಪರ್ಕಿಸಿ ಆಪ್ತಸಮಾಲೋಚನೆ ಮೂಲಕ ಯುವಜನರು ವ್ಯಸನದಿಂದ ದೂರವಿರಿಸಲು ಪ್ರಯತ್ನಿಸುವಂತೆ ಸೂಚಿಸಿದರು.ಇಂದಿನ ಯುವಜನರಲ್ಲಿ ಆನ್‌ಲೈನ್ ಹಾಗೂ ಅಂತರಾಷ್ಟ್ರೀಯ ವಿಡಿಯೋ ಗೇಮ್‌ಗಳ ಅತಿಯಾದ ಬಳಕೆಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಫ್ರೀ ಫೈರ್, ಪಬ್ಜಿ ಸೇರಿದಂತೆ ವಿವಿಧ ಆನ್‌ಲೈನ್ ಗೇಮ್‌ಗಳ ಮೇಲೆ ಅತಿಯಾಗಿ ಅವಲಂಭಿತರಾದರೆ ವಿದ್ಯಾಭ್ಯಾಸಕ್ಕೆ ಮತ್ತು ಕುಟುಂಬ ಸಂಬಂಧಗಳಿಗೆ ಹಾಗೂ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಗಮನಹರಿಸಿ ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯಬೇಕು ಎಂದು ಡಾ. ಕೆ. ಕುಮಾರ್ ಹೇಳಿದರು.
ಜೀವನದಲ್ಲಿ ಸೋಲುಗಳು ಸಹಜ. ಐದು ಅಥವಾ ಹತ್ತು ಬಾರಿ ಸೋಲು ಕಂಡರೂ ಒಂದು ದಿನ ಗೆಲುವು ಖಂಡಿತವಾಗಿ ಸಿಗುತ್ತದೆ. ಆದ್ದರಿಂದ ಯಾವುದೇ ಕಷ್ಟದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
10ಕೆ ಆರ್ ಎಂಎನ್ 1.ಜೆಪಿಜಿ