ಕನ್ನಡಪ್ರಭ ವಾರ್ತೆ ಹಿರೇಕೆರೂರು
ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ತಹಸೀಲ್ದಾರ ಹಾಗೂ ತಾಲೂಕಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಗ್ರಾಮಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಪರಿಶೀಲನೆ ನಡೆಸಬೇಕು.
ನೀರಿನ ಸಮಸ್ಯೆಗಳ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಪಡೆದು ಬೇಸಿಗೆ ಕುಡಿಯುವ ನೀರಿನ ನಿರ್ವಹಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದರು.
ಹಿರೇಕೆರೂರು ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಪೂರೈಕೆ ಕುರಿತಂತೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಬರುವ ಜೂನ್ ಮಾಹೆವರೆಗೆ ಎಲ್ಲ ಅಧಿಕಾರಿಗಳು ವಿಶೇಷವಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಜೂನ್‌ವರೆಗೆ ಯಾವೊಬ್ಬ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿಕೊಳ್ಳಬಾರದು ಎಂದು ಸೂಚಿಸಿದರು.
ಹಿರೇಕೆರೂರು ತಾಲೂಕಿನಲ್ಲಿ ಖಾಸಗಿ ಕೊಳವೆಬಾವಿಗಳಿಂದ ಏಳು ಗ್ರಾಮಗಳಿಗೆ ಕುಡಿಯುವ ನೀರನ್ನು ಮೊದಲಿನಿಂದಲೂ ಪೂರೈಸಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಎರಡು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ.
ಒಟ್ಟಾರೆ ಒಂಭತ್ತು ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಹಿರೇಕೆರೂರು ಪಟ್ಟಣದಲ್ಲಿ ಒಂದು ವಾರ್ಡಿನಲ್ಲಿ ನೀರಿನ ಸಮಸ್ಯೆ ತಲೆದೊರಿದ್ದು, ನಾಳೆ ಕೊಳವೆಬಾವಿ ಕೊರೆಸಲಾಗುತ್ತದೆ. ಉಳಿದಂತೆ ಪ್ರತಿ ಮೂರು ದಿನಕ್ಕೊಮ್ಮೆ ನಳದ ನೀರು ಪೂರೈಸುತ್ತಿರುವುದಾಗಿ ಕಾರ್ಯನಿರ್ವಾಹಕ ಅಭಿಯಂತರರು ಮಾಹಿತಿ ನೀಡಿದರು.
ರಟ್ಟಿಹಳ್ಳಿ ತಾಲೂಕಿನಲ್ಲಿ ಎರಡು ಗ್ರಾಮಗಳಿಗೆ ಖಾಸಗಿ ಕೊಳವೆಬಾಯಿಂದ ನೀರು ಪೂರೈಸಲಾಗುತ್ತಿದೆ. ರಟ್ಟಿಹಳ್ಳಿ ಒಳಗೊಂಡಂತೆ ೧೧ ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಯೋಜನೆಯ ಪೈಪ್‌ಲೈನ್ ಜಿ.ಎಂ. ಶುಗರ್ ಫ್ಯಾಕ್ಟರಿ ವ್ಯಾಪ್ತಿಯಲ್ಲಿ ಡ್ಯಾಮೇಜ್ ಮಾಡಲಾಗಿದೆ. ಈ ಕುರಿತಂತೆ ಕಂಪನಿಯವರಿಗೆ ಮಾಹಿತಿ ನೀಡಲಾಗಿದ್ದು, ಈವರೆಗೆ ದುರಸ್ತಿಮಾಡಿಲ್ಲ. ಈ ಕಾರಣಕ್ಕೆ ಶೇ.೫೦ರಷ್ಟು ನೀರಿನ ಪ್ರಮಾಣ ಕಡಿಮೆಯಾಗಿರುವುದಾಗಿ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದರು.
ಜಿ.ಎಂ. ಶುಗರ್ ಕಾರ್ಖಾನೆ ಆವರಣದೊಳಗೆ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಕುರಿತಂತೆ ಸಭೆ ನಡೆಸಿ, ಒಂದು ವಾರದೊಳಗಾಗಿ ಪೈಪ್‌ಲೈನ್ ದುರಸ್ತಿ ಪಡಿಸಲು ಕ್ರಮವಹಿಸಿ. ಇಲ್ಲವಾದರೆ ಕಂಪನಿಯ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ತಡಸ ಮತ್ತು ಆಣೂರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಮಾರ್ಚ್‌ನೊಳಗೆ ಮುಗಿಸಬೇಕು. ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಡಬ್ಲ್ಯೂಟಿಪಿ ಹಾಗೂ ಜಾಕವೆಲ್ ಇಂಟೆಕ್‌ವೆಲ್‌ಗಳ ಕೆಲಸದ ವಿಳಂಬ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು, ಮೂರು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಕುರಿತಂತೆ ಲಿಖಿತವಾಗಿ ನೀಡಬೇಕು.
ಕಾಮಗಾರಿ ವಿಳಂಬಮಾಡಿದ ಗುತ್ತಿಗೆದಾರನಿಗೆ ನೋಟೀಸ್ ಜಾರಿಗೊಳಿಸಬೇಕು. ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ಕಾನೂನಿನ ತೊಡಕುಗಳು ಉಂಟಾದಲ್ಲಿ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳು ಅಗತ್ಯ ನೆರವು ನೀಡುವಂತೆ ಸೂಚನೆ ನೀಡಿದರು.
ಜಲಸಂಪನ್ಮೂಲ ಇಲಾಖೆಯಿಂದ ತಾಲೂಕಿನಲ್ಲಿ ಐದು ಕೆರೆ ತುಂಬಿಸುವ ಯೋಜನೆಯ ಕಾಮಗಾರಿಗಳ ಪೈಕಿ ಮಡ್ಲೂರು, ದುರ್ಗಾದೇವಿ, ಗುಡ್ಡದಮಾದಾಪೂರ ಈ ಮೂರು ಕೆರೆ ಕಾಮಗಾರಿಗಳು ಪೂರ್ಣಗೊಂಡಿದ್ದು, ಶೇ.೩೧ರಷ್ಟು ಪ್ರಮಾಣದಲ್ಲಿ ಕೆರೆಗಳನ್ನು ತುಂಬಿಸಲಾಗಿದೆ.
₹೧೯೦ ಕೋಟಿ ವೆಚ್ಚದಲ್ಲಿ ಸರ್ವಜ್ಞ ಕೆರೆ ತುಂಬಿಸುವ ಯೋಜನೆ ಈಗಾಗಲೇ ₹೧೩೫ ಕೋಟಿ ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಶೇ.೭೦ರಷ್ಟು ಕೆಲಸ ಮುಗಿದಿದೆ. ₹೨೧ ಕೋಟಿ ವೆಚ್ಚದ ಬುಳ್ಳಾಪುರ ಕೆರೆ ತುಂಬಿಸುವ ಯೋಜನೆಗಳು ಪ್ರಗತಿಯಲ್ಲಿದ್ದು, ಎರಡು ಕಾಮಗಾರಿಗಳು ಡಿಸೆಂಬರೊಳಗಾಗಿ ಮುಗಿಸಬೇಕಾಗಿತ್ತು.
ಪವರ್ ಸಪ್ಲೈ ಮತ್ತು ಪೈಪ್‌ಲೈನ್ ಕೆಲಸ ಬಾಕಿ ಇರುವುದಾಗಿ ಕಾಮಗಾರಿ ಅವಧಿ ವಿಸ್ತರಣೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹನುಮಂತಪ್ಪ ಮಾಹಿತಿ ನೀಡಿದರು.
ಕುಡಿಯುವ ನೀರಿನ ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ಮುಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಆದಾಗ್ಯೂ ಒಂದುವರೆ ವರ್ಷ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಮುಗಿಸುವ ಅವಧಿ ವಿಸ್ತರಣೆಯನ್ನು ಸ್ಥಳೀಯ ಶಾಸಕರಿಗಾಗಲಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೇ ಮಾಡಿರುವ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾಮಗಾರಿ ವಿಳಂಬ ಮಾಡಿದ ಏಜೆನ್ಸಿಗಳಿಗೆ ನೋಟೀಸ್ ಜಾರಿಗೊಳಿಸಿ ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸಲು ಸೂಚಿಸಿ, ಈ ಕುರಿತಂತೆ ವಿವರ ಸಲ್ಲಿಸಲು ಸೂಚನೆ ನೀಡಿದರು. ತಪ್ಪಿದಲ್ಲಿ ಅಮಾನತುಗೊಳಿಸುವುದಾಗಿ ಎಚ್ಚರಿಸಿದರು.
ಬೆಳೆ ಪರಿಹಾರ: ಬರದ ಹಿನ್ನೆಲೆ ಬೆಳೆಹಾನಿಯಾದ ರೈತರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಹಣವನ್ನು ಫ್ರೂಟ್ ಐಡಿಯಲ್ಲಿ ನೋಂದಾಯಿಸಿದ ಜಿಲ್ಲೆಯ ರೈತರ ಖಾತೆಗೆ ತ್ವರಿತವಾಗಿ ಹಣ ಜಮಾವಣೆಗೆ ಸರ್ಕಾರದ ಗಮನ ಸೆಳೆದು ಕ್ರಮವಹಿಸುವಂತೆ ಸೂಚನೆ ನೀಡಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಬರದ ಸಂದರ್ಭದಲ್ಲಿ ನೀರಿನ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಜಾನುವಾರಗಳ ಕಳ್ಳತನ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ವಿಶೇಷ ಕಾಳಜಿ ವಹಿಸಬೇಕು. ನೀರಾವರಿಗೆ ಒತ್ತು ನೀಡುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ತಾಲೂಕಿನ ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತಂತೆ ಮಾಹಿತಿ ನೀಡಿ, ಬರ ಪರಿಹಾರ ಇನ್‌ಫುಟ್ ಸಬ್ಸಿಡಿಗೆ ರೈತರ ಜಮೀನುಗಳ ಫ್ರೂಟ್ ಐಡಿಯಲ್ಲಿ ದಾಖಲಿಸುವುದು ಕಡ್ಡಾಯ.
ಜಿಲ್ಲೆಯಲ್ಲಿ ಶೇ.೮೫ ರಷ್ಟು ಫ್ರೂಟ್‌ಐಡಿಗಳು ದಾಖಲಾಗಿದ್ದು, ರಾಜ್ಯದಲ್ಲೇ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರೈತರ ಖಾತೆಗೆ ನೇರವಾಗಿ ಬರ ಪರಿಹಾರ ಹಣ ಜಮೆಯಾಗಲಿದೆ. ಮೂರ‍್ನಾಲ್ಕು ದಿನದಲ್ಲಿ ಜಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ ಇತರರು ಉಪಸ್ಥಿತರಿದ್ದರು.