- ಶಾಲೆ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ
- - -ಕನ್ನಡಪ್ರಭ ವಾರ್ತೆ ನ್ಯಾಮತಿ
ಬೆಳಗುತ್ತಿ ಮಲ್ಲಿಗೇನಹಳ್ಳಿ ಗ್ರಾಮದ ಮಹಿಳೆಯರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣ ದೇವಸ್ಥಾನದ ಕಳಸ ನಿರ್ಮಾಣಕ್ಕಾಗಿ ನೀಡಿದ್ದಾರೆ. ಅವರಿಗೆ ಧನ್ಯವಾದಗಳು. ಗ್ರಾಮಗಳಲ್ಲಿ ದೇವಸ್ಥಾನ, ಸಮುದಾಯ ಭವನ ನಿರ್ಮಾಣಕ್ಕಿಂತ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ಬೆಳಗುತ್ತಿ ಗ್ರಾಮದಲ್ಲಿ ಎನ್.ಆರ್.ಎಲ್.ಎಂ. ಭವನ, ಸ್ವಚ್ಛತ ಸಂಕೀರ್ಣ ಹಾಗೂ ಮಲ್ಲಿಗೇನಹಳ್ಳಿ ಶಾಲಾ ಕೊಠಡಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲೆಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಮಕ್ಕಳ ಓದಿಗೆ ಅನುಕೂಲವಾಗುತ್ತದೆ. ಶೈಕ್ಷಣಿಕ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು. ಗ್ರಾಮಸ್ಥರ ಜೊತೆ ತಾವೂ ಕೈ ಜೋಡಿಸುತ್ತೇವೆ. ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಪ್ರೋತ್ಸಾಹಧನ ಪಡೆದು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಬಳಸಬೇಕು. ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯಾಗುವಂತೆ ಬೆಳೆಸಬೇಕು ಎಂದು ಪೋಷಕರಿಗೆ ತಿಳಿಸಿದರು.
ಬೆಳಗುತ್ತಿ ಬಸ್ ನಿಲ್ದಾಣದ ಸಮೀಪ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ. ಗ್ರಾಪಂ ಹಸಿಕಸ ಹಾಗೂ ಒಣಕಸ ತೆಗೆದುಕೊಂಡು ಹೋಗುವ ವಾಹನ ಶೀಘ್ರ ಒದಗಿಸಲಾಗುವುದು. ಗ್ರಾ.ಪಂ.ನಲ್ಲಿ ನೂತನವಾಗಿ ನಿರ್ಮಿಸಿರುವ ಭವನದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚಿಸಿ, ನೀವು ಕೂಡ ಆರ್ಥಿಕ ಕ್ಷೇತ್ರದಲ್ಲಿ ಸಬಲೀಕರಣ ಹೊಂದಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಶಾಸಕರ ಅನುದಾನದಲ್ಲಿ ಬೆಳಗುತ್ತಿ ಗ್ರಾಮದಲ್ಲಿ ₹40 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಕ್ಷತ್ರಿಯ ಸಮುದಾಯಕ್ಕೆ ₹10 ಲಕ್ಷ, ಅರಸು ಸಮುದಾಯ ಭವನಕ್ಕೆ ₹10 ಲಕ್ಷ ಹಾಗೂ ಮಲ್ಲಿಗೇನಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ₹10 ಲಕ್ಷ ಸೇರಿದಂತೆ ಒಟ್ಟು 70 ಲಕ್ಷ ಅನುದಾನ ಅವಳಿ ಗ್ರಾಮಗಳ ಅಭಿವೃದ್ಧಿಗೆ ನೀಡಿದ್ದೇನೆ ಎಂದರು.
4 ತಿಂಗಳಲ್ಲಿ ಬಹುಗ್ರಾಮ ಯೋಜನೆಯಡಿ ಈ ಭಾಗದ 57 ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲಾಗುವುದು. ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು. ರಸ್ತೆ ಅಭಿವೃದ್ಧಿ ಮಾಡಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಈ ಭಾಗದ ಅನೇಕ ಗ್ರಾಮಗಳಿಗೆ ಸರ್ಕಾರಿ ಬಸ್‌ಗಳನ್ನು ಓಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನಾಗರತ್ಮಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನುಚ್ಚಿನ ವಾಗೀಶ್, ನ್ಯಾಮತಿ ತಾಪಂ ಇಒ ರಾಘವೇಂದ್ರ, ಬಿಇಒ ನಿಂಗಪ್ಪ, ಎಇಇ ನಾಗರಾಜಪ್ಪ, ನ್ಯಾಮತಿ ತಾ.ಪಂ ಎಡಿ. ಸಂಗಮೇಶ್, ಎಚ್.ಎ.ಉಮಾಪತಿ, ನಾಗಪ್ಪ, ಕುಭೇರಪ್ಪ, ಪಿಡಿಒ ಮಂಜುನಾಥ, ಎಲ್. ನಾಗರಾಜ್ ಹಾಗೂ ಗ್ರಾಮಸ್ಥರು ಮತ್ತಿತರರಿದ್ದರು.
- - -(** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)
-ಚಿತ್ರ:ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಎನ್.ಆರ್.ಎಲ್.ಎಂ. ಭವನ, ಸ್ವಚ್ಛತ ಸಂಕೀರ್ಣ ಹಾಗೂ ಮಲ್ಲಿಗೇನಹಳ್ಳಿ ಶಾಲಾ ಕೊಠಡಿಯ ನೂತನ ಕಟ್ಟಡವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು. ಶಾಸಕ ಡಿ.ಜಿ. ಶಾಂತನಗೌಡ, ಗ್ರಾಪಂ ಅಧ್ಯಕ್ಷೆ ನಾಗರತ್ಮಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನುಚ್ಚಿನ ವಾಗೀಶ್ ಇತರರು ಇದ್ದರು.