ಶಿರಹಟ್ಟಿ: ರೈತರು ನೀರು ಮತ್ತು ಮಣ್ಣಿನ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಕೃಷಿ ಬೇಸಾಯ ಪದ್ಧತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಸುರೇಶ ಕುಂಬಾರ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವ ವಿದ್ಯಾನಿಲಯ ಗದಗನ ಎಂ.ಎ.,ಎಂಕಾಂ, ಎಂಎಸ್ಸಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಣ್ಣು, ನೀರು ಸಂರಕ್ಷಣೆ ಮತ್ತು ಪರೀಕ್ಷೆ ಕುರಿತು ಮಾಹಿತಿ ನೀಡಿ ಮಾತನಾಡಿದರು.ರೈತರು ಹೆಚ್ಚು ನೀರು ಬಳಸಿ ಬೇಸಾಯ ಮಾಡುವುದನ್ನು ನಿಲ್ಲಿಸಬೇಕು. ಹನಿ ನೀರಾವರಿ ಬೇಸಾಯ ಪದ್ಧತಿ ಕಡೆಗೆ ಹೆಚ್ಚು ಗಮನ ಹರಿಸಬೇಕು. ಕಡಿಮೆ ನೀರಿನಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳಿಗೆ ಆದ್ಯತೆ ನೀಡಬೇಕು. ಭೂಮಿಗೆ ಹೆಚ್ಚು ನೈಸರ್ಗಿಕ ರಸಗೊಬ್ಬರ ಹಾಕುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಶೇ.೩೬.೨೯ರಷ್ಟು (೬೯.೬ ಲಕ್ಷ ಹೆಕ್ಟೇರ್) ಭೂಮಿಯಲ್ಲಿ ಮಣ್ಣಿನ ಫಲವತ್ತತೆ ನಾಶವಾಗಿದ್ದು, ಬರಡು ಭೂಮಿಯ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ನೀರಾವರಿ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ಜಲಾನಯನ ಪ್ರದೇಶದಲ್ಲೂ ಕಳೆದ ಒಂದು ದಶಕದಿಂದ ಮಣ್ಣಿನ ಫಲವತ್ತತೆ ನಿರಂತರವಾಗಿ ಕುಸಿಯುತ್ತಿದೆ. ಕೃಷಿ ಉತ್ಪಾದನೆಯ ದೃಷ್ಟಿಯಲ್ಲಿ ಇದು ಆತಂಕಕಾರಿ ಬೆಳವಣಿಗೆ ಎಂದು ಎಚ್ಚರಿಸಿದರು.ಈ ಪ್ರಕ್ರಿಯೆ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗ ನಡೆಸಿದ ಮಣ್ಣಿನ ಫಲವತ್ತತೆ ಕುರಿತ ಜಾಗೃತಿಕ ಸಮೀಕ್ಷಾ ವರದಿ ಪ್ರಕಾರ ಜಗತ್ತಿನ ಶೇ.೩೩ರಷ್ಟು ಭೂಮಿ ಫಲವತ್ತತೆ ಕಳೆದುಕೊಂಡಿರುವ ಮಾಹಿತಿ ಇದೆ. ಅತಿಯಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ, ಸಕಾಲದಲ್ಲಿ ಸಾವಯವ ಗೊಬ್ಬರ ನೀಡದೆ ಇರುವುದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಅಲ್ಲದೆ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಿಂದ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಭೂಮಿ ಸವಕಳಾಗುತ್ತಿರುವುದು ಅಧ್ಯಯನದಿಂದ ಗೊತ್ತಾಗಿದೆ ಎಂದು ಹೆಳಿದರು.
ಯಾವ ರೈತರು ಮಣ್ಣನ್ನು ಮತ್ತು ನೀರನ್ನು ಸಂರಕ್ಷಿಸುತ್ತಾರೋ ಅವರು ಅಧಿಕ ಇಳುವರಿ ಪಡೆದು ಆರ್ಥಿಕ ಸಬಲತೆ ಸಾಧಿಸುತ್ತಾರೆ. ರೈತ ಸ್ವತ ವಿಜ್ಞಾನಿಯಾಗಿ ಹೊಲದಲ್ಲಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಹೆಚ್ಚಿನ ಉತ್ಪಾದನೆ ಆಗುವುದರ ಜತೆಗೆ ಕೃಷಿ ಲಾಭದಾಯಕ ವೃತ್ತಿಯಾಗುತ್ತದೆ. ಹನಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವ ಮೂಲಕ ಮಣ್ಣು ಕೆಡದಂತೆ ನೋಡಿಕೊಳ್ಳಬೇಕು. ಅಂತರ ಬೇಸಾಯಕ್ಕೆ ಒತ್ತು ನೀಡಬೇಕು ಎಂದರು.