ಕನ್ನಡಪ್ರಭ ವಾರ್ತೆ ಯಾದಗಿರಿ
ಗಡಿಭಾಗದ ಕ್ರೀಡಾಪ್ರೇಮಿಗಳು ಮತ್ತು ಕ್ರೀಡಾಪಟುಗಳು ಉತ್ತಮ ಸಾಧನೆಗೈಯಲು ಅನುಕೂಲವಾಗುವ ನಿಟ್ಟಿನಲ್ಲಿ ಗುರುಮಠಕಲ್ ವ್ಯಾಪ್ತಿಯಲ್ಲಿ 5 ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು.ಪಟ್ಟಣದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಪಂಚಾಯತ್, ಮತ್ತು ಪುರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 2025-26ನೇ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದ ಈ ದಿನಗಳಲ್ಲಿ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಬಳಕೆ ಹೆಚ್ಚಾಗಿದೆ. ಕ್ರೀಡಾಸಕ್ತಿ ಕಡಿಮೆಯಾದದ್ದು ವಿಷಾದನೀಯ, ದೈಹಿಕ-ಮಾನಸಿಕ ಬಲ ಹೆಚ್ಚಿಸಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ. ಗಡಿಭಾಗದ ಈ ನಾಡಿನಲ್ಲಿ ಉತ್ತಮ ಕ್ರೀಡೆಗಳಿಗೆ ಉತ್ತಮ ಪ್ರೋತ್ಸಾಹ ನೀಡುವ ಜೊತೆಗೆ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಕ್ರೀಡಾ ಪರಿಕರಗಳ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಲು ಸಹಕಾರ ನೀಡುವುದಾಗಿ ತಿಳಿಸಿದರು.
ಆಟಗಳು ದೈಹಿಕ ಶ್ರಮದ ಜೊತೆಗೆ ಮಾನಸಿಕವಾಗಿ ಬಲಗೊಳ್ಳುವಂತೆ ಮಾಡುತ್ತವೆ. ಪಂದ್ಯಗಳಲ್ಲಿ ಸೋಲು ಗೆಲುವುಗಳನ್ನು ಧನಾತ್ಮಕ ದೃಷ್ಟಿಯಿಂದ ಸಮನಾಗಿ ಸ್ವೀಕರಿಸುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು. ಇತ್ತೀಚೆಗೆ ರಾಷ್ಟ್ರಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಗೈದ ಚಪೆಟ್ಲಾ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿದರು. ಯುವ ಸಬಲೀಕರಣ ಇಲಾಖೆಯ ರಾಜು ಬಾವಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್. ಪೊಲೀಸ್ ಪಾಟೀಲ್, ಪುರಸಭೆ ಸದಸ್ಯರಾದ ನರ್ಮಾದಾ ಅವಂಗಾಪೂರ, ಬಾಲಪ್ಪ ದಾಸರಿ, ಅಶೋಕ ಕಲಾಲ್, ಸೇರಿದಂತೆ ಶಿಕ್ಷಣ ಸಂಯೋಜಕರಾದ ರವೀಂದ್ರ, ಬಾಲಪ್ಪ ಸಿರಿಗೆಂ, ಹಾಗೂ ದೈಹಿಕ ಶಿಕ್ಷಕರು, ಜೆಡಿಎಸ್ ಮುಖಂಡರಾದ ಬಸಣ್ಣ ದೇವರಳ್ಳಿ, ಪ್ರಕಾಶ ನೀರಟ್ಟಿ, ಶರಣು ಅವುಂಟಿ, ಅಂಬಾದಾಸ ಜೀತ್ರಿ, ಎಸ್.ಪಿ ಮಹೇಶ್ ಗೌಡ, ಭಾನುಪ್ರಕಾಶ ಮೇದಾ, ವಿವಿಧ ಶಾಲೆಗಳ ಕ್ರೀಡಾ ವಿದ್ಯಾರ್ಥಿಗಳು ಇದ್ದರು.