ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನಲ್ಲಿ ಬಹೃತ್ ಕೈಗಾರಿಕಾ ಪ್ರಾಂಗಣ ಸ್ಥಾಪನೆಗೆ ಅವಕಾಶ ನೀಡಿರುವ ಸ್ಥಳೀಯರಿಗೆ ಉದ್ಯೋಗ ಸಿಗದಿರುವುದು ಬೇಸರದ ಸಂಗತಿಯಾಗಿದ್ದು, ಶೇ.೭೫ ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ಸ್ಥಳೀಯರಿಗೆ ಅಗುತ್ತಿರುವ ಅನ್ಯಾಯಕ್ಕೆ ಸರಿಪಡಿಸುವುದಾಗಿ ಶಾಸಕ ಕೆ.ವೈ.ನಂಜೇಗೌಡ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಡಾ.ಕಿರಣ್ ಸೋಮಣ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಾ.ಕಿರಣ್ ಸೋಮಣ್ಣ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ೨ನೇ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ತಾಲೂಕಿನ ರೈತರು ತಮ್ಮ ಜಮೀನನ್ನು ಕೈಗಾರಿಕಾ ಸ್ಥಾಪನೆಗಾಗಿ ನೀಡಿದ್ದು, ಅವರ ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಅವಕಾಶ ಇಲ್ಲದಂತಾಗಿದೆ. ಈ ವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು ಎಂದರು.ಕೋಲಾರ ಹಾಗೂ ಮಾಲೂರು ತಾಲೂಕಿನಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳು ಸ್ಥಾಪನೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ೧೬೦೦ ಎಕರೆ ವಿಸ್ತೀರ್ಣದಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಲು ಅದ್ಯತೆ ನೀಡಿದ್ದಾರೆ. ಮುಂದೆ ಇನ್ನೂ ದೊಡ್ಡ ದೊಡ್ಡ ಕಾರ್ಖಾನೆಗಳು ಪ್ರಾರಂಭವಾಗುತ್ತಿವೆ. ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವುದರಿಂದ ಜಿಲ್ಲೆಯು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ.ಕಿರಣ್ ಸೋಮಣ್ಣ ಅವರು ತಾಲೂಕಿನಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ. ಇದರ ಜತೆಗೆ ಕಂಪನಿಗಳು ನೇರವಾಗಿ ಉದ್ಯೋಗ ನೀಡಲು ಮುಂದಾಗಿದ್ದು, ಇದು ಕಾಂಟ್ರ್ಯಾಕ್ಟ್ ಬೇಸ್ ಆಗಬಾರದು. ಕಂಪನಿಗಳಿಗೆ ಆಯ್ಕೆ ಮಾಡಿಕೊಳ್ಳುವವರು ೧೧ ತಿಂಗಳಿಗೆ ವಾಪಸ್ಸು ಕಳುಹಿಸಬಾರದು. ಕೆಲವು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.ಡಾ.ಕಿರಣ್ ಸೋಮಣ್ಣ ಮಾತನಾಡಿ, ಎಕೆಎಸ್ ಟ್ರಸ್ಟ್ ವತಿಯಿಂದ ಕಳೆದ ೮ ವರ್ಷಗಳಿಂದ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಳೆದ ೨ ವರ್ಷಗಳಿಂದ ಉದ್ಯೋಗ ನೀಡುವ ಕಾರ್ಯಕ್ರಮ, ಮಾಸ್ತಿ, ಟೇಕಲ್, ತೊರಲಕ್ಕಿ, ಡಿ.ಎನ್.ದೊಡ್ಡಿ ಭಾಗಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಮಹಿಳೆಯರು, ಮಕ್ಕಳಿಗೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ೧೧ ಶಾಲೆಗಳಿಗೆ ಮೂಲಭೂತ ಸೌಕರ‍್ಯ ಕಲ್ಪಿಸಿ ಅನುಕೂಲ ಕಲ್ಪಿಸಲಾಗಿದೆ. ಚಿಕ್ಕದಾನವಹಳ್ಳಿ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹಲವು ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡಲಾಗಿದೆ. ಉದ್ಯೋಗ ಮೇಳವನ್ನು ಆಯೋಜನೆ ಮಾಡಿ ಕಳೆದ ವರ್ಷ ೪ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ. ಪ್ರಸ್ತುತ ವರ್ಷದಲ್ಲೂ ೫ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲು ಆದ್ಯತೆ ನೀಡಿದ್ದು, ಉದ್ಯೋಗ ಖಾತ್ರಿಯ ಪತ್ರ ವಿತರಿಸಲಾಗಿದೆ ಎಂದರು.
ಮಾಜಿ ಶಾಸಕ ಎ.ನಾಗರಾಜ್, ಕುರುಬರ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ ಅಂಜನಿ ಸೋಮಣ್ಣ, ಡಾ.ಪ್ರತಿಭಾ ಕಿರಣ್, ಕೋಮುಲ್ ಸದಸ್ಯರಾದ ಕಾಂತಮ್ಮ, ಜಯಸಿಂಹ ಕೃಷ್ಣಪ್ಪ, ಮಲಪನಹಳ್ಳಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕಿಟ್ಟಣ್ಣ (ಕಿಟ್ಟಿ), ಪುರಸಭೆ ಸದಸ್ಯರಾದ ಕೋಮಲ ನಾರಾಯಣ್, ಭಾರತಮ್ಮ ಶಂಕರಪ್ಪ, ಪರಮೇಶ್, ಮುರುಳಿಧರ್, ವೆಂಕಟೇಶ್ (ಬುಲೆಟ್), ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರು, ಇನ್ನಿತರರು ಹಾಜರಿದ್ದರು.