ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಹೇಳಿದ್ದಾರೆ.ಕಾಫಿ ಮಂಡಳಿ ವತಿಯಿಂದ ಕೂತಿ ಗ್ರಾಮದ ಒಕ್ಕಲಿಗರ ಸಮುದಾಯ ಭವನದಲ್ಲಿ ಬುಧವಾರ ನಡೆದ ಕಾಫಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಫಿ ಕೃಷಿ ಬಗ್ಗೆ ಅಧ್ಯಯನ ಮಾಡಬೇಕು. ವೈಜ್ಞಾನಿಕ ಮಾದರಿಯಲ್ಲೆ ಕೃಷಿ ಮತ್ತು ಸಂಸ್ಕರಣೆ ಮಾಡುವುದನ್ನು ಕಲಿತರೆ ಗುಣಮಟ್ಟದ ಕಾಫಿ ಉತ್ಪಾದಿಸಬಹುದು ಎಂದು ಕಿವಿಮಾತು ಹೇಳಿದರು.ಕೂತಿ ಗ್ರಾಮದಲ್ಲಿ ರೈತ ಉತ್ಪಾದಕ ಸಂಘವನ್ನು ಪ್ರಾರಂಭಿಸಿದರೆ, ಕಾಫಿ ಮಂಡಳಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ರೈತರು ಕೂಡ ಕಾಫಿ ಮಂಡಳಿಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಕಾಫಿ ಡ್ರಯರ್ ಅವಶ್ಯಕವಾಗಿ ಅಳವಡಿಸಿಕೊಳ್ಳಲೇಬೇಕಾಗಿದೆ. ಕಾಫಿ ಮಂಡಳಿಯಿಂದ ಶೇ.೭೫ರಷ್ಟು ಸಬ್ಸಿಡಿ ದೊರೆಯಲಿದೆ ಎಂದರು.
ಬಾಳೆಹೊನ್ನೂರು ಕಾಫಿ ಮಂಡಳಿ ವಿಜ್ಞಾನಿ ಡಾ. ಗೋಪಿನಂದನ್, ಕಾಫಿ ಸಂರಕ್ಷಣೆಯಲ್ಲಿ ಗುಣಮಟ್ಟ ಸುಧಾರಣೆ ವಿಷಯದಲ್ಲಿ ಮಾತನಾಡಿ, ಉತ್ತಮ ತಳಿಯ ಹಣ್ಣಿನ ಬೀಜ ಆಯ್ಕೆ ಮಾಡಿಕೊಂಡು ಸಸಿ ಬೆಳೆದು ನೆಟ್ಟರೆ ಮಾತ್ರ ಉತ್ತಮ ಫಸಲು ಪಡೆಯಬಹುದು. ಕಾಫಿ ಹಣ್ಣು ಕೊಯ್ಲು ಮಾಡಿದ ದಿನವೇ ಪಲ್ಪಿಂಗ್ ಮಾಡಿದರೆ, ಕಾಫಿಯ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ಹೇಳಿದರು. ಸೂಕ್ತ ಸ್ಥಳದಲ್ಲಿ ಒಣಗಲು ಹಾಕಿ, ಗಂಟೆಗೊಮ್ಮೆ ಹರಡಬೇಕು. ಸಮಪ್ರಮಾಣದಲ್ಲಿ ಒಣಗಿಸಿದ ಕಾಫಿಯನ್ನು ಚೀಲದಲ್ಲಿ ತುಂಬಿ ಮರದ ಹಲಗೆಯ ಮೇಲೆ ಜೋಡಿಸಬೇಕು ಎಂದು ಹೇಳಿದರು.ಕಾಫಿ ಮಂಡಳಿ ಉಪನಿರ್ದೇಶಕ ಡಾ.ವಿ. ಚಂದ್ರಶೇಖರ್, ಪ್ರಗತಿಪರ ಕೃಷಿಕ ಎಚ್.ಎಸ್. ಧರ್ಮರಾಜ್, ಮಣ್ಣು ವಿಜ್ಞಾನಿ ಎಸ್.ಎ.ನಡಾಫ್, ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯರಾಮ್ ಇದ್ದರು.