ಕನ್ನಡಪ್ರಭ ವಾರ್ತೆ ಕೋಲಾರಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಣ, ಎಂಪತಿ (ಸಂವೇದನಾಶೀಲತೆ) ಹಾಗೂ ಎನ್ಫೋಸ್ಮೆಂಟ್ (ಕಠಿಣ ಜಾರಿ) ಎಂಬ ಮೂರು ’ಇ’ ಮಂತ್ರಗಳು ಅತ್ಯಗತ್ಯ. ಕೇವಲ ದಂಡನೆ ಅಥವಾ ಕಾನೂನು ಕ್ರಮದಿಂದ ಬದಲಾವಣೆ ಸಾಧ್ಯವಿಲ್ಲ, ಜನರ ನೋವಿಗೆ ಮಿಡಿಯುವ ಗುಣ ಅಧಿಕಾರಶಾಹಿಯಲ್ಲಿ ಬಂದಾಗ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ವರ್ಷದ ಕೊನೆಯ ದಿನವಾದ ಬುಧವಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸವಾಲು ಮುಕ್ತವಾಗಿ ಸ್ವೀಕರಿಸಿ
೧,೩೭೯ ಕೆರೆ ಒತ್ತುವರಿ ತೆರವು
ಕೋಲಾರವನ್ನು ‘ಕೆರೆಗಳ ನಾಡು’ ಎಂದು ಬಣ್ಣಿಸಿದ ಅವರು, ಜಿಲ್ಲೆಯ ೩,೨೩೨ ಕೆರೆಗಳ ಪೈಕಿ ಈಗಾಗಲೇ ೨,೯೩೨ ಕೆರೆಗಳ ಸರ್ವೇ ಪೂರ್ಣಗೊಂಡಿದೆ. ೧,೩೭೯ ಕೆರೆಗಳಲ್ಲಿನ ಒತ್ತುವರಿ ಬಹುತೇಕ ತೆರವುಗೊಳಿಸಲಾಗಿದ್ದು, ಇನ್ನುಳಿದ ೫೦ ಕೆರೆಗಳಲ್ಲಿ ಬೆಳೆ ಅಥವಾ ಮಳೆಯ ಕಾರಣದಿಂದ ಪ್ರಕ್ರಿಯೆ ಬಾಕಿ ಇದೆ. ತೆರವುಗೊಳಿಸಿದ ಕೆರೆಗಳಿಗೆ ಶಾಶ್ವತವಾಗಿ ಫೆನ್ಸಿಂಗ್ ಅಥವಾ ಟ್ರಂಚ್ ನಿರ್ಮಿಸಲು ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿಸಿದರು.ಭೂಸುರಕ್ಷಾ ಯೋಜನೆಯಡಿ ಜಿಲ್ಲಾ ಮತ್ತು ಉಪವಿಭಾಗಾಧಿಕಾರಿ ಕಚೇರಿಯ ಲಕ್ಷಾಂತರ ದಾಖಲೆಗಳನ್ನು ಡಿಜಟಲೀಕರಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ದಾಖಲೆಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಾಗಲಿವೆ. ಇದಲ್ಲದೆ, ಮೂಲಸೌಕರ್ಯದಿಂದ ವಂಚಿತವಾದ ೧೪೫ ವಾಸಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ವಿವರಿಸಿದರು.ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯನಗರ ಸ್ವಚ್ಛತೆ ಕೇವಲ ನಗರಸಭೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಕಸಮುಕ್ತ ನಗರ ನಿರ್ಮಾಣಕ್ಕೆ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಗತ್ಯ. ಅಧಿಕಾರಿಗಳಲ್ಲಿ ಸಂವೇದನಾಶೀಲತೆ ಕಡಿಮೆಯಾದಾಗ ಸಮಾಜವೇ ಅವರನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಎಚ್ಚರಿಸಿದ ಅವರು "ನಾನು ಮಾಡುವ ಕೆಲಸಕ್ಕೆ ಮೊದಲು ನನ್ನ ಆತ್ಮಸಾಕ್ಷಿಗೆ ಉತ್ತರಿಸಬೇಕಿದೆ. ಮಾಡಿದ ಕೆಲಸಗಳ ಬಗ್ಗೆ ಇತಿಹಾಸವೇ ಮಾತನಾಡಲಿ ಎಂಬುದು ನನ್ನ ಆಶಯ ಎಂದು ನುಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಮುನಿರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ ಇದ್ದರು.