ಶಿಕ್ಷಣದ ಜೊತೆಗೆ ಕಲೆಗೂ ಆದ್ಯತೆ ನೀಡಲಿ: ಸಿಇಒ ರಾಹುಲ್ ರತ್ನಂ ಪಾಂಡ್ಯೆ

KannadaprabhaNewsNetwork |  
Published : Nov 09, 2024, 01:13 AM IST
8ಕೆಪಿಎಲ್21 ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರದಂದು  ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ-2024 ರ ಕಾರ್ಯಕ್ರಮ | Kannada Prabha

ಸಾರಾಂಶ

ಇಂದಿನ ಯುವ ಪೀಳಿಗೆ ಮೊಬೈಲ್‌ಗಳಿಗೆ ತುಂಬಾ ಹತ್ತಿರವಾಗಿದ್ದು, ಅದನ್ನು ತ್ಯಜಿಸಿ ಕಲೆ, ಸಾಹಿತ್ಯ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ರಾಹುಲ್ ರತ್ನಂ ಪಾಂಡ್ಯೆ ಹೇಳಿದರು.

ಕೊಪ್ಪಳ: ಯುವಜನರು ಕೇವಲ ಓದು, ಬರಹ ಅಂತ ಮೀಸಲಿರದೆ ತಮ್ಮಲ್ಲಿರುವ ಕಲೆಗೂ ಹೆಚ್ಚಿನ ಆದ್ಯತೆ ನೀಡಬೇಕು. ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡ್ಯೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವ ಸಂಘಗಳ ಒಕ್ಕೂಟ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಯುವಜನೋತ್ಸವ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಪೀಳಿಗೆ ಮೊಬೈಲ್‌ಗಳಿಗೆ ತುಂಬಾ ಹತ್ತಿರವಾಗಿದ್ದು, ಅದನ್ನು ತ್ಯಜಿಸಿ ಕಲೆ, ಸಾಹಿತ್ಯ ಚಟುವಟಿಕೆಗೆ ಹೆಚ್ಚಿನ ಒತ್ತು ಕೊಡಬೇಕು. ಯುವಕ-ಯುವತಿಯರು ಮಾನಸಿಕವಾಗಿ ಸದೃಢರಾಗಲು ಯೋಗ ಹಾಗೂ ಕ್ರೀಡೆಯಲ್ಲಿ ತೊಡಗಬೇಕು. ಯುವಕರು ಎಲ್ಲರೊಂದಿಗೆ ಸಾಮರಸ್ಯ ಜೀವನ ನಡೆಸುವ ಶೈಲಿ ಬೆಳೆಸಿಕೊಳ್ಳಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಜಿಲ್ಲೆಯಲ್ಲಿ ಹೆಸರು ವಾಸಿಯಾದ ಕಲೆ, ಸಾಹಿತ್ಯ ಪ್ರೋತ್ಸಾಹಿಸುವ ಜೊತೆಗೆ ಸಂರಕ್ಷಿಸೋಣ ಎಂದು ತಿಳಿಸಿದರು.

ಯಾವುದೇ ಕೆಲಸ ಚಿಕ್ಕದು, ದೊಡ್ಡದಲ್ಲ. ಕೆಲಸದಲ್ಲಿ ಶ್ರದ್ಧೆ ಹಾಗೂ ಶ್ರಮ ಮುಖ್ಯವಾಗಿದೆ. ಯುವಕ‌-ಯುವತಿಯರಿಗಾಗಿ ಹಲವಾರು ಅವಕಾಶಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು. ಕಲಿಕೆ ಒಂದೇ ಮಾರ್ಗವಲ್ಲ, ಬದಲಾಗಿ ಅನೇಕ ರಂಗಗಳಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬ ಯುವಕ-ಯುವತಿಯರು ವಿಭಿನ್ನ ಹಾಗೂ ವಿಶಿಷ್ಟವಾದ ಪ್ರತಿಭೆ ಹೊಂದಿರುತ್ತಾರೆ. ಸಂಕಲ್ಪ ಇಟ್ಟುಕೊಂಡು ಗುರಿ ತಲುಪಿದರೆ, ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಮಾತನಾಡಿ, ರಾಜ್ಯದಲ್ಲಿ ಸಾಂಸ್ಕೃತಿಕ ನೀತಿಗಳು ಜಾರಿಯಾಗಬೇಕು. ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು. ಸೋಲು-ಗೆಲವು ಮುಖ್ಯವಲ್ಲ, ಮೊದಲು ಭಾಗವಹಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಜಾನಪದ ತರಬೇತಿಗಳನ್ನು ನೀಡಬೇಕು ಎಂದು ಹೇಳಿದರು.

ಹಿರಿಯ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ನಮ್ಮ ಜಿಲ್ಲೆಯು ಜಾನಪದ ಕಲೆಗಳಿಂದ ಶ್ರೀಮಂತವಾಗಿದೆ. ಇಲ್ಲಿನ ಹೆಸರಾಂತ ಕಲೆಗಳು ಬಹಳ ಪುರಾತನವಾದದ್ದು ಆಗಿದೆ. ಗವಿಮಠ ವರ್ಷದಿಂದ ವರ್ಷಕ್ಕೆ ಸಾಂಸ್ಕೃತಿಕ ಸ್ವರೂಪವನ್ನು ಹೆಚ್ಚು ಪಡೆಯುತ್ತಿದೆ. ಯುವಪೀಳಿಗೆ ಓದುವುದರ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಬಿ. ಜಾಬಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸನ್ಮಾನ: ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು (ಸಾಹಿತ್ಯ ಕ್ಷೇತ್ರ) ಹಾಗೂ ರುಕ್ಮಿಣಿಬಾಯಿ ಚಿತ್ರಗಾರ (ಚಿತ್ರಕಲೆ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನೆಹರು ಯುವ ಕೇಂದ್ರದ ಮೊಂಟು ಪತ್ತಾರ, ಜೀವನ್ ಸಾಬ್ ಬಿನ್ನಾಳ, ಅಕ್ಬರ್ ಮಿರ್ಚಿ ಸೇರಿದಂತೆ ನಿರ್ಣಾಯಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ