ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಪ್ರಗತಿ ಹೊಂದಬೇಕಾದರೆ ಶೈಕ್ಷಣಿಕವಾಗಿ ಮುಂದುವರೆಯುವುದು ಅತ್ಯಗತ್ಯ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
ಈಡಿಗ ಸಮುದಾಯದ ವಿದ್ಯಾರ್ಥಿಗಳು ವಿವಿಧ ಹಂತದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಪ್ರತಿಭಾವಂತರಾಗಿ ಗುರುತಿಸಿಕೊಳ್ಳುತ್ತಿರುವುದು ಗಣನೀಯವಾಗಿದೆ. ಅದೇ ರೀತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಮುದಾಯದ ಯುವಜನರು ಉನ್ನತ ಸಾಧನೆಯನ್ನು ಮಾಡಬೇಕಿದೆ. ಆಗ ಮಾತ್ರ ಸಮಗ್ರ ಪ್ರಗತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಿಂದುಳಿದ ಸಮುದಾಯಗಳಲ್ಲಿ ಹೆಚ್ಚು ಹೆಚ್ಚು ಯುವಜನರು ಆಡಳಿತದ ಚುಕ್ಕಾಣಿ ಹಿಡಿಯುವ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಎಂಬ ಆಶಯ ದಿವಂಗತ ಆರ್.ಎಲ್.ಜಾಲಪ್ಪ ಅವರದ್ದಾಗಿತ್ತು. ಇದೇ ಕಾರಣದಿಂದ ಸೋಲೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅಕಾಡೆಮಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕೆಎಎಸ್, ಐಎಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ತರಬೇತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.ಇದೇ ವೇಳೆ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ತಾಲೂಕು ಘಟಕದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಶ್ರೀಸತ್ಯ ದರ್ಶನ ಧರ್ಮದತ್ತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ಅಧ್ಯಕ್ಷ ಡಾ.ವಿನಯ್‌ಬಾಬು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್‌ಸ್ಟಿಟ್ಯೂಶನ್‌ನ ಅಧ್ಯಕ್ಷ ಜೆ.ಆರ್.ರಾಕೇಶ್, ಆರ್.ಎಲ್.ಜಾಲಪ್ಪ ಅಕಾಡೆಮಿಯ ನರಸಿಂಹಸ್ವಾಮಿ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ಉಪಾಧ್ಯಕ್ಷ ನಾಗರಾಜ್, ಸತೀಶ್, ಕಾರ್ಯದರ್ಶಿ ರವಿಕಿರಣ್, ಶಾಂತ ರಾಜ್‌ಕುಮಾರ್, ಕುಮಾರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಫೋಟೋ-
24ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ನಡೆಯಿತು.