6ನೇ ಮೈಲಿಕಲ್ಲು ಬಳಿ ಭೀಕರ ಅಪಘಾತ । ಮನೆಗೆ ನುಗ್ಗಿದ ಬಸ್: ಮಾಲೀಕನಿಗೆ ಗಂಭೀರ ಗಾಯ
----ಕನ್ನಡಪ್ರಭ ವಾರ್ತೆ ದಾವಣಗೆರೆ
ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮನೆಗೆ ನುಗ್ಗಿದ್ದರಿಂದ ಮನೆಯು ಬುನಾದಿ ಸಮೇತ ಅದುರಿದ ಘಟನೆ ಆರನೇ ಮೈಲುಕಲ್ಲು ಗ್ರಾಮದ ಬಳಿ ಗುರುವಾರ ರಾತ್ರಿ 9 ಗಂಟೆಗೆ ಸಂಭವಿಸಿದೆ.ತಾಲೂಕಿನ ಹದಡಿ ಗ್ರಾಮದ ಎಚ್.ರಮೇಶ(55 ವರ್ಷ), ರಾಜಪ್ಪ ತೇಜಪ್ಪ(45) ಮೃತ ಬೈಕ್ ಸವಾರರು. ಭದ್ರಾವತಿ-ದಾವಣಗೆರೆ ಮಧ್ಯೆ ಸಂಚರಿಸುವ ಎಸ್ಎಂಎಲ್ ಬಸ್ ಚನ್ನಗಿರಿ ಕಡೆ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದು, ರಸ್ತೆ ಬಲಭಾಗದ ಕಡೆಗಿದ್ದ ಮನೆಯೊಂದಕ್ಕೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಮನೆ ಮಾಲೀಕನ ಕಾಲು ಮುರಿದಿದೆ.
ವೇಗದಲ್ಲಿದ್ದ ಬಸ್, ಬೈಕ್ ಹಾಗೂ ಮನೆಗೆ ಡಿಕ್ಕಿ ಹೊಡೆದಿದ್ದರಿಂದ ಬಸ್ಸಿನಲ್ಲಿದ್ದವರಿಗೂ ಗಂಭೀರ ಹಾಗೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ಡು, ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮನೆಗೆ ಡಿಕ್ಕಿ ಹೊಡೆದಿದ್ದರಿಂದ ಮನೆಗೋಡೆಗೆ ಬಿರುಕುಂಟಾಗಿ, ಮನೆ ಒಳಗಿದ್ದ ಸಾಮಾನು ಸರಂಜಾಮು ಚೆಲ್ಲಾಪಿಲ್ಲಿಯಾಗಿದೆ.ಬಸ್ಸು ಗುದ್ದಿದ ರಭಸಕ್ಕೆ ಮನೆಯು ಅಡಿಪಾಯದಿಂದಲೇ ಒಂದಿಷ್ಟು ಅದುರಿ, ಗೋಡೆ ಬಿರುಕು ಬಿಟ್ಟಿದೆ. ಮನೆಯಲ್ಲಿದ್ದವರು ಭಯದಿಂದ ಕೂಗಿ ಕೊಂಡು ಹೊರಗೆ ಓಡಿ ಬಂದಿದ್ದಾರೆ. ಬಸ್ಸಿನಲ್ಲಿದ್ದವರಿಗೂ ಪೆಟ್ಟಾಗಿದ್ದು, ಗಾಯಾಳುಗಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಿದೆ.
..................ಕ್ಯಾಪ್ಷನ
30ಕೆಡಿವಿಜಿ11, 12, 13-ದಾವಣಗೆರೆ ತಾ. ಆರನೇ ಮೈಲುಕಲ್ಲು ಬಳಿ ಬೈಕ್ ಗೆ ಡಿಕ್ಕಿ ಹೊಡೆದು, ಇಬ್ಬರನ್ನು ಬಲಿ ಪಡೆದ ಬಸ್ಸು ಮನೆಯೊಂದರ ಗೋಡೆಗೆ ಡಿಕ್ಕಿ ಹೊಡೆದು, ನಿಂತಿರುವುದು.