ಕನ್ನಡಪ್ರಭ ವಾರ್ತೆ ರಾಮನಗರ
ಸ್ವಾತಂತ್ರ್ಯ ದಿನದಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲೆಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟ - ಉಸ್ಮಾರ್ಡ್ ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.
ಹೊಸ ಶಾಲೆಗಳಿಗೆಂದು ರಚನೆಯಾಗಿರುವ ಹಲವಾರು ನಿಯಮಗಳನ್ನು ಹಳೆಯ ಸಂಸ್ಥೆಗಳ ಮೇಲೂ ಅವೈಜ್ಞಾನಿಕವಾಗಿ ಹೇರಲು ಯತ್ನಿಸಿದ ಶಿಕ್ಷಣ ಇಲಾಖೆಯ ವಿರುದ್ಧ ಕ್ಯಾಮ್ಸ್ ಸೇರಿದಂತೆ ರಾಜ್ಯದ ವಿವಿಧ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಅಲ್ಲದೆ ವಿವಿಧ ವಿಚಾರಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಕಡೆಗಣಿಸಿ ಅಧಿಕಾರಿ ವರ್ಗ ದರ್ಪ ತೋರುತ್ತಿದ್ದಾರೆ ಎಂದು ಸಹ ಆರೋಪಿಸಲಾಗಿತ್ತು. ಆದರೆ,ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಮನವಿಗೆ ಕವಡೆ ಕಾಸಿನ ಕಿಮತ್ತು ನೀಡದಿದ್ದರಿಂದ ಕೆರಳಿದ್ದ ಆಡಳಿತ ಮಂಡಳಿಗಳು ಇದೇ ಆ.15ರಂದು ಸ್ವಾತಂತ್ರ್ಯ ದಿನದಂದು ಕರಾಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದರು.
ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ನಿರ್ಧಾರವನ್ನು ತಿಳಿದ ಶಿಕ್ಷಣ ಸಚಿವರು, ಮಂಗಳವಾರ ಬೆಂಗಳೂರಿನಲ್ಲಿ ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಕ್ಯಾಮ್ಸ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಚಿವ ಮಧು ಬಂಗಾರಪ್ಪ ಅವರಿಗೆ ತಮ್ಮ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟರು.ಖಾಸಗಿ ಅನುದಾನ ರಹಿತ ಶಾಲೆಗಳ ಸಮಸ್ಯೆಗಳನ್ನು ಆಲಿಸಿದ ಶಿಕ್ಷಣ ಸಚಿವರು, ಒಂದು ತಿಂಗಳ ಕಾಲಾವಕಾಶ ಕೇಳಿದ್ದಾರೆ. ತಾವು ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಆಯಾ ಖಾತೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ, ಸಮನ್ವಯ ಸಾಧಿಸುವುದಾಗಿ ಭರವಸೆ ನೀಡಿದ್ದಾರೆ, ಕರಾಳ ದಿನ ಆಚರಣೆಯನ್ನು ಕೈಬಿಡುವಂತೆ ತಿಳಿಸಿದ್ದಾರೆ. ಸಚಿವರ ಭರವಸೆಯ ಮೇರೆಗೆ ಸ್ವಾತಂತ್ರ್ಯ ದಿನದಂದು ಕರಾಳ ದಿನ ಆಚರಣೆಯನ್ನು ಕೈಬಿಡಲಾಗಿದೆ. ಆದರೆ ತಿಂಗಳ ನಂತರವೂ ಅವೈಜ್ಞಾನಿಕ ನಿಯಮಗಳನ್ನು ಹಿಂಪಡೆಯದಿದ್ದರೆ, ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಉಸ್ಮಾರ್ಡ್ ಅಧ್ಯಕ್ಷ ಪ್ರದೀಪ್ ಮಾಹಿತಿ ನೀಡಿದ್ದಾರೆ.