ದಾವಣಗೆರೆ : ರಾಷ್ಟ್ರೀಯ ಬ್ಯಾಂಕ್‌ಗಳ ಖಾಸಗೀಕರಣ ಅಪಾಯಕಾರಿ: ಕೆ. ರಾಘವೇಂದ್ರ ನಾಯರಿ

KannadaprabhaNewsNetwork |  
Published : Jul 21, 2024, 01:31 AM ISTUpdated : Jul 21, 2024, 09:53 AM IST
19ಕೆಡಿವಿಜಿ10, 11-ದಾವಣಗೆರೆಯಲ್ಲಿ ಶುಕ್ರವಾರ ಬ್ಯಾಂಕ್ ರಾಷ್ಟ್ರೀಕರಣದ 55ನೇ ವಾರ್ಷಿಕೋತ್ಸವದಲ್ಲಿ ಕೆ.ರಾಘವೇಂದ್ರ ನಾಯರಿ, ಅಜಿತಕುಮಾರ ನ್ಯಾಮತಿ, ಎಚ್.ಎಸ್‌. ತಿಪ್ಪೇಸ್ವಾಮಿ, ವಿಶ್ವನಾಥ ಬಿಲ್ಲವ ಇತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

  ಬ್ಯಾಂಕ್‌ಗಳ ರಾಷ್ಟ್ರೀಕರಣವು ಜನತೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿದೆ. ಇದು ದೇಶದ ಅತಿ ದೊಡ್ಡ ಆರ್ಥಿಕ ಕ್ರಾಂತಿಯಾಗಿದೆ. ಹೀಗಿರುವಾಗ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವ ನಡೆ ಅಪಾಯಕಾರಿ  

 ದಾವಣಗೆರೆ : ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ (ಎಐಬಿಇಎ) ಸುದೀರ್ಘ ಹೋರಾಟದಿಂದ 1969ರ ಜುಲೈ 19ರಂದು ಜಾರಿಗೊಂಡ ಬ್ಯಾಂಕ್‌ಗಳ ರಾಷ್ಟ್ರೀಕರಣವು ಜನತೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿದೆ. ಇದು ದೇಶದ ಅತಿ ದೊಡ್ಡ ಆರ್ಥಿಕ ಕ್ರಾಂತಿಯಾಗಿದೆ. ಹೀಗಿರುವಾಗ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾಗಿರುವ ನಡೆ ಅಪಾಯಕಾರಿ ಎಂದು ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್‌ ಜಂಟಿ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಹೇಳಿದರು.

ನಗರದ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ಯಾಂಕ್ ರಾಷ್ಟ್ರೀಕರಣದ 55ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ದೇಶವನ್ನು ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತಿರುವ ಬ್ಯಾಂಕ್ ರಾಷ್ಟ್ರೀಕರಣ ದಿನವನ್ನು ಬ್ಯಾಂಕ್ ಉದ್ಯೋಗಿಗಳು ಮಾತ್ರವಲ್ಲದೇ, ದೇಶದ ಜನತೆ ಆಚರಿಸಬೇಕು ಎಂದರು.

ಖಾಸಗಿ ವಲಯದಲ್ಲಿದ್ದ 14 ಪ್ರಮುಖ ಬ್ಯಾಂಕ್‌ಗಳನ್ನು ಅಂದು ಪ್ರಧಾನಿ ಇಂದಿರಾ ಗಾಂಧಿ ರಾಷ್ಟ್ರೀಕರಣಗೊಳಿಸುವ ಮೂಲಕ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆದರು. 1980ರ ಏಪ್ರಿಲ್‌ 15ರಲ್ಲಿ ಮತ್ತೆ 6 ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು. ಬ್ಯಾಂಕ್ ರಾಷ್ಟ್ರೀಕರಣದ ಫಲವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಯಿತು. ಬ್ಯಾಂಕಿಂಗ್ ಸೌಲಭ್ಯವು ದೇಶದ ಮೂಲೆ ಮೂಲೆಗೂ ತಲುಪುವಂತಾಯಿತು ಎಂದು ತಿಳಿಸಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಅಜಿತಕುಮಾರ ನ್ಯಾಮತಿ ಮಾತನಾಡಿ, ಸರ್ಕಾರದ ಅನೇಕ ಯೋಜನೆಗಳು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕವೇ ಜನರನ್ನು ತಲುಪುತ್ತಿವೆ. ಖಾಸಗಿ ಬ್ಯಾಂಕುಗಳು ತಮ್ಮ ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತವೆಯೇ ವಿನಃ, ಸೇವಾ ಮನೋಭಾವನೆಯಿಂದಲ್ಲ. ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ದುಸ್ಸಾಹಸಕ್ಕೆ ಮುಂದಾಗಬಾರದು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಎಚ್.ಎಸ್. ತಿಪ್ಪೇಸ್ವಾಮಿ ಮಾತನಾಡಿ, ಬ್ಯಾಂಕ್ ನೌಕರರ ಸಂಘದ ಧ್ಯೇಯವಾಕ್ಯದಂತೆ ಬ್ಯಾಂಕುಗಳು ಗಳಿಸುವ ಲಾಭವು ದೇಶದ ಜನರ ಕಲ್ಯಾಣಕ್ಕಾಗಿ ಬಳಕೆಯಾಗಬೇಕೇ ಹೊರತು, ಖಾಸಗಿ ಕಂಪನಿಗಳ ಲೂಟಿಗಾಗಿ ಅಲ್ಲ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳು ನಾಗರೀಕರ ಮೂಲಭೂತ ಹಕ್ಕಾಗಬೇಕು ಎನ್ನುವ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿಂಗ್ ವ್ಯವಸ್ಥೆ ಉಳಿಸಿಕೊಳ್ಳಲು ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದರು.

ದಾವಣಗೆರೆ- ಚಿತ್ರದುರ್ಗ ಜಿಲ್ಲಾ ನಿವೃತ್ತ ಬ್ಯಾಂಕ್ ನೌಕರರ ಒಕ್ಕೂಟದ ಉಪ ಪ್ರಧಾನ ಕಾರ್ಯದರ್ಶಿ ಎಚ್.ಸುಗುರಪ್ಪ, ಜಿಲ್ಲಾ ಸಂಘದ ಖಜಾಂಚಿ ಕೆ.ವಿಶ್ವನಾಥ್ ಬಿಲ್ಲವ, ಉಪಾಧ್ಯಕ್ಷರಾದ ಎಂ.ಎಂ. ಸಿದ್ದಲಿಂಗಯ್ಯ, ಆರ್.ಆಂಜನೇಯ, ಜಂಟಿ ಕಾರ್ಯದರ್ಶಿಗಳಾದ ಸಿ.ಪರಶುರಾಮ, ಎಂ.ಡಿ.ವಿದ್ಯಾಸಾಗರ, ಎನ್.ವಿ.ಶ್ರೀನಿವಾಸ, ಡಿ.ಎನ್‌.ಅಣ್ಣಪ್ಪ, ನಂದಾ, ಎಂ.ರಮೇಶ, ಪ್ರಶಾಂತ ಶ್ರೀನಿವಾಸ, ಡಿ.ಹರ್ಷದ, ಎನ್‌.ಪಿ.ನಾಗಭೂಷಣ, ಎಸ್.ಗಜೇಂದ್ರ ಇತರರು ಇದ್ದರು.

ಬಾಕ್ಸ್‌ ಉದ್ಯೋಗ ಸೃಷ್ಠಿ, ಶಿಕ್ಷಣ, ಆರೋಗ್ಯ, ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಬ್ಯಾಂಕ್ ರಾಷ್ಟ್ರೀಕರಣ ಗಮನಾರ್ಹ ಕೊಡುಗೆಯನ್ನು ನೀಡಿದೆ. ಆದರೆ, ಸರ್ಕಾರದ ಖಾಸಗೀಕರಣ ನೀತಿ ಫಲವಾಗಿ ಜು.22ರಿಂದ ಆರಂಭ ಆಗಲಿರುವ ಬಜೆಟ್ ಅಧಿವೇಶನದಲ್ಲಿ ಕೇಂದ್ರವು ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಕೈ ಹಾಕುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ತಿದ್ದುಪಡಿಗೆ ಸಂಸತ್ತು ಅನುಮೋದನೆ ನೀಡಿದರೆ ಅದೊಂದು ರಾಷ್ಟ್ರೀಯ ದುರಂತಕ್ಕೆ ಕಾರಣವಾಗಲಿದೆ ಎಂದು ರಾಘವೇಂದ್ರ ನಾಯರಿ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾದರೆ ರಾಷ್ಟ್ರೀಕೃತ ಬ್ಯಾಂಕುಗಳ ಜನ ಸಾಮಾನ್ಯರ 180 ಲಕ್ಷ ಕೋಟಿಗೂ ಹೆಚ್ಚಿನ ಠೇವಣಿ ಹಣದ ಸುರಕ್ಷತೆಗೆ ಅಪಾಯ ಎದುರಾಗಲಿದೆ. 2023-2024ರ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ₹1,41,203 ಕೋಟಿ ನಿವ್ವಳ ಲಾಭ ಗಳಿಸಿ, ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ದೇಶದ ಆಸ್ತಿ. ಅದನ್ನು ಇನ್ನಷ್ಟು ಬಲಗೊಳಿಸಲು ಸರ್ಕಾರ ಮುಂದಾಗಬೇಕೇ ಹೊರತು, ಖಾಸಗೀಕರಣಗೊಳಿಸಬಾರದು ಎಂದು ಹೇಳಿದರು. 

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ