ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯದ ಕಡುಬಡವರು, ನಿರ್ಗತಿಕರು ಮತ್ತು ವಿಶೇಷ ಚೇತನರ ಬಾಳಿಗೆ ಊರುಗೋಲಾಗಲು ಸರ್ಕಾರ ಅನುದಾನವನ್ನು ಮೀಸಲಿರಿಸಿ ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ಸವಲತ್ತು ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ತಾಲೂಕಿನ ಅರ್ಹ ವಿಶೇಷ ಚೇತನರಿಗೆ ಉಚಿತವಾಗಿ ಸಾಧನ ಸಲಕರಣೆ ಮತ್ತು ಇಲಾಖೆಯಿಂದ ಯಂತ್ರಚಾಲಿತ ತ್ರಿಚಕ್ರವಾಹನ ವಿತರಿಸಿ ಮಾತನಾಡಿದರು.
ಸರ್ಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮಹೋನ್ನತ ಯೋಜನೆ ಇದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಯಾವುದೇ ಯೋಜನೆಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿ ಬದುಕು ನಡೆಸಬೇಕು ಎಂದರು.ವಿಶೇಷ ಚೇತನರೂ ಸೇರಿದಂತೆ ಎಲ್ಲ ವರ್ಗದ ಕಡುಬಡವರು, ನಿರ್ಗತಿಕರ ಹಿತಕಾಯಲು ಸರ್ಕಾರ ಬದ್ಧವಾಗಿದೆ. 5 ಗ್ಯಾರಂಟಿ ಯೋಜನೆಗಳ ಜೊತೆಗೆ ಹಲವು ಯೋಜನೆ, ಸವಲತ್ತು ಪಡೆದುಕೊಳ್ಳುವ ಫಲಾನುಭವಿಗಳು ಸರ್ಕಾರದ ಯೋಜನೆ ಯಾರ ಕಾಲದಲ್ಲಿ ನಮಗೆ ಸಿಕ್ಕಿತೆಂಬುದನ್ನು ಸ್ಮರಿಸಿಕೊಳ್ಳಬೇಕು ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ವಿಶೇಷ ಚೇತನ ಮಗುವೊಂದನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿ ಸ್ವಲ್ಪದೂರ ಕರೆದೊಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅರ್ಹ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಿದರು.ಸಮಾರಂಭದಲ್ಲಿ ಅರ್ಹ ಫಲಾನುಭವಿಗಳಿಗೆ 14 ಬೈಸಿಕಲ್, 10 ಬ್ಯಾಟರಿ ಸೈಕಲ್, 10 ದೊಡ್ಡ ಗಾಲಿ ಕುರ್ಚಿ, 1 ಚಿಕ್ಕ ಗಾಲಿಕುರ್ಚಿ, 6ವಾಕರ್, 15 ಶ್ರವಣ ಸಾಧನ, 1 ಊರುಗೋಲು, ಇಬ್ಬರು ಅಂಧರಿಗೆ ಕೇನ್ ಮತ್ತು 7 ಮಂದಿ ವಿಶೇಷ ಚೇತನರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನ ವಿತರಿಸಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯ ತಿಮ್ಮಪ್ಪ, ತಹಸೀಲ್ದಾರ್ ಜಿ.ಆದರ್ಶ್, ತಾಪಂ ಇಓ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಸಿಡಿಪಿಓ ಕೃಷ್ಣಮೂರ್ತಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಕೋಮಲ್‌ಕುಮಾರ್, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ತಿಮ್ಮರಾಯಿಗೌಡ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ, ಸುನಿಲ್, ಶಶಿಕುಮಾರ್ ಸೇರಿದಂತೆ ಹಲವರು ಇದ್ದರು.