ಭ್ರೂಣ ಲಿಂಗ ಪತ್ತೆ ಬಗ್ಗೆ ಮಾಹಿತಿ ನೀಡಿದರೆ 1 ಲಕ್ಷ ರು. ಬಹುಮಾನ: ಡಿಸಿ ಡಾ. ವಿದ್ಯಾಕುಮಾರಿ

KannadaprabhaNewsNetwork | Published : Jun 30, 2024 12:49 AM

ಸಾರಾಂಶ

ಶನಿವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಜಿಲ್ಲೆಯಲ್ಲಿ ಅನಧೀಕೃತವಾಗಿ ಸ್ಕ್ಯಾನಿಂಗ್ ಸೆಂಟರ್‌ಗಳು ನಡೆಯುತ್ತಿರುವ ಬಗ್ಗೆ ಹಾಗೂ ಭ್ರೂಣಲಿಂಗ ಪತ್ತೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಹೇಳಿದ್ದಾರೆ.

ಅವರು ಶನಿವಾರ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ಸಾಲಿನಲ್ಲಿ ಈವರೆಗೆ ಜಿಲ್ಲೆಯಲ್ಲಿ 302 ಗರ್ಭಪಾತ ಪ್ರಕರಣಗಳು ವರದಿಯಾಗಿವೆ. ಅವುಗಳಲ್ಲಿ 84 ಸ್ವಾಭಾವಿಕ ಗರ್ಭಪಾತವಾಗಿವೆ. ಉಳಿದವು ವೈದ್ಯಕೀಯ ಕಾರಣಗಳಿಗೆ ನಡೆಸಲಾಗಿವೆ ಎಂದ ಅವರು ಕಾನೂನು ಬಾಹಿರವಾಗಿ, ವೈದ್ಯರ ಸಲಹೆ ಇಲ್ಲದೆ ಭ್ರೂಣ ಲಿಂಗ ಪತ್ತೆಗಳು ನಡೆಸುವುದು ಕಾನೂನುಬಾಹಿರವಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರವಹಿಸಬೇಕು ಎಂದರು.ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 3 ತಾಯಿ ಮರಣ ಪ್ರಕರಣಗಳಾಗಿವೆ. ಅವುಗಳಲ್ಲಿ 2 ಹೊರ ಜಿಲ್ಲೆಗಳ ಪ್ರಕರಣಗಳಿವೆ. ಬಾಣಂತಿಯರಿಗೆ ಪ್ರಾರಂಭದಿಂದಲೇ ತಾಯಿ ಕಾರ್ಡ್‌ಗಳನ್ನು ವಿತರಿಸಿ, ನಿರಂತರ ಆರೋಗ್ಯ ತಪಾಸಣೆ ಮಾಡಿ, ಮುಂದೆ ಯಾವುದೇ ತಾಯಿ ಮರಣಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ನಾಡದಲ್ಲಿ ಎಂಡೋ ಪುನರ್ವಸತಿ: ಎಂಡೋಸಲ್ಫಾನ್ ಬಾಧಿತರಿಗೆ ಬೈಂದೂರಿನ ನಾಡ ಪಂಚಾಯಿತಿಯ ಸೇನಾಪುರ ಗ್ರಾಮದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ಕ್ರಮವಹಿಸಬೇಕು. ಪ್ರಸ್ತುತ ತಾತ್ಕಾಲಿಕವಾಗಿ ಹತ್ತಿರದಲ್ಲಿಲಭ್ಯವಿರುವ ಶಾಲಾ ಕಟ್ಟಡದಲ್ಲಿ ಪುನರ್ವಸತಿ ನಡೆಸಬೇಕು. ಎಂಡೋ ಬಾಧಿತರಿರುವ ಪ್ರದೇಶಗಳ ಸಾರ್ವಜನಿಕ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಫಿ ಘಟಕಗಳನ್ನು ಪ್ರಾರಂಭಿಸಬೇಕು ಎಂದವರು ಸೂಚಿಸಿದರು.

ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ಪ್ರಸ್ತುತ ಸಾಲಿನಲ್ಲಿ 7536 ನಾಯಿ ಕಡಿತ ಪ್ರಕರಣಗಳು, 151 ಹಾವು ಕಡಿತ ಪ್ರಕರಣಗಳಾಗಿವೆ. ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು. ಮಣಿಪಾಲ ವ್ಯಾಪ್ತಿಯಲ್ಲಿ ಹೆಚ್ಚು ನಾಯಿ ಕಡಿತ ಪ್ರಕರಣಗಳಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ಕ್ಷಯರೋಗಿಗಳ ದತ್ತು ಯೋಜನೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ಷಯ ಮುಕ್ತ ಭಾರತ ಅಭಿಯಾನ ನಡೆಯುತ್ತಿದ್ದು, ಗ್ರಾಪಂ ವ್ಯಾಪ್ತಿಯಲ್ಲಿ ಕ್ಷಯರೋಗಿಗಳನ್ನು ದತ್ತು ಪಡೆಯಲು ದಾನಿಗಳನ್ನು ಪ್ರೋತ್ಸಾಹಿಸಿ, ಕ್ಷಯರೋಗಿಗಳಿಗೆ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರವನ್ನು ಒದಗಿಸಿ, ಕ್ಷಯರೋಗ ಹಾಗೂ ರೋಗಿಗಳನ್ನು ಗುಣಮುಖರನ್ನಾಗಿಸಿ, ಕ್ಷಯ ಮುಕ್ತ ಗ್ರಾಮವನ್ನಾಗಿಸಬೇಕು ಎಂದರು.

ಜಿಲ್ಲೆಯಲ್ಲಿ 1500 ಯೂನಿಟ್ ರಕ್ತ ಸಂಗ್ರಹ ಮಾಡಬೇಕಾದ ಗುರಿ ಹೊಂದಲಾಗಿದೆ. ಆದರೆ, ಈವರೆಗೆ 29,107 ಯೂನಿಟ್‌ಗಳಷ್ಟು ರಕ್ತ ಸಂಗ್ರಹವಾಗಿರುತ್ತದೆ. ರಕ್ತ ನಿಧಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾದಲ್ಲಿ ಅವುಗಳಿಗೆ ನಿಯಮಾನುಸಾರ ಅನುಮತಿ ನೀಡಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share this article