ಹೊಸಪೇಟೆ: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳು ಈ ಬಾರಿ ಪಕ್ಷದ ಕೈಹಿಡಿಯಲಿವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಯೋಜನೆಗಳಿಗೂ ಅನುದಾನ ಒದಗಿಸಿದ್ದಾರೆ. ಬಿಜೆಪಿ ಹಣ ಬಲದೊಂದಿಗೆ ಚುನಾವಣೆ ನಡೆಸುತ್ತಿದೆ. ನಾವು ಅಭಿವೃದ್ಧಿ ದೃಷ್ಟಿಕೋನದೊಂದಿಗೆ ಚುನಾವಣೆ ನಡೆಸುತ್ತಿದ್ದೇವೆ ಎಂದರು.ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆ. ಬಡ ಕುಟುಂಬಗಳಿಗೆ ಕ್ರಾಂತಿಕಾರಕ ಯೋಜನೆಗಳನ್ನು ನೀಡಲಾಗಿದೆ. ಲೋಕಸಭೆ ಚುನಾವಣೆಯಲ್ಲೂ ಕಲ್ಯಾಣ ಕರ್ನಾಟಕದ ನಾಲ್ಕು ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. 371 (ಜೆ) ಮೀಸಲಾತಿ ಕೂಡ ಈ ಭಾಗದ ಜನರಿಗೆ ಅನುಕೂಲ ಆಗಿದೆ ಎಂದರು.
ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆ ಇದೆ. ಕನ್ನಡ ವಿಶ್ವವಿದ್ಯಾಲಯ ಕೂಡ ಹೊರತಾಗಿಲ್ಲ. ಯುಜಿಸಿ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಎನ್‌ಇಪಿ ಜಾರಿ ಮಾಡಿದೆ. ಆದರೆ, ವಿಶ್ವವಿದ್ಯಾಲಯಗಳಿಗೆ ಅನುದಾನ ಒದಗಿಸುವುದರತ್ತ ಗಮನಹರಿಸಿಲ್ಲ. ರಾಜ್ಯದಿಂದ ತೆರಿಗೆ ರೂಪದಲ್ಲಿ ನೂರು ರು. ತೆಗೆದುಕೊಳ್ಳುವ ಕೇಂದ್ರ ಸರ್ಕಾರ ಮರಳಿ ನೀಡುತ್ತಿರುವುದು ಬರೀ ₹13 ಮಾತ್ರ. ಹಾಗಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ದೂರಿದರು.ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಲಾಗುತ್ತಿದೆ. ಇದರಿಂದ ರೈತರು, ಕಾರ್ಮಿಕರು, ಶಾಲಾ ಮಕ್ಕಳು ಸೇರಿದಂತೆ ಎಲ್ಲ ವಲಯದ ಪ್ರವಾಸಿಗರಿಗೆ ಆದ್ಯತೆ ನೀಡುವ ಯೋಚನೆ ಹೊಂದಲಾಗಿದೆ. ಹಂಪಿ ಸೇರಿದಂತೆ ರಾಜ್ಯದ ಎಲ್ಲ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು. ಪ್ರವಾಸಿ ಮಾರ್ಗದರ್ಶಿಗಳ ಕೊರತೆ ನೀಗಿಸಲು ಹೊಸ ಗೈಡ್‌ಗಳನ್ನು ನೇಮಕ ಮಾಡಲಾಗುವುದು. ಗದಗ, ಹಂಪಿ ವಿಶ್ವವಿದ್ಯಾಲಯಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುವುದು ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಇದ್ದರು.