ಕೊರಟಗೆರೆಯಲ್ಲಿ ಕೇಂದ್ರ ಗೃಹ ಸಚಿವರ ಗಡಿಪಾರಿಗೆ ದಲಿತ ಪರ ಸಂಘಟನೆಗಳ ಆಗ್ರಹ

KannadaprabhaNewsNetwork | Published : Dec 20, 2024 12:45 AM

ಸಾರಾಂಶ

ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಕೊರಟಗೆರೆ ತಾಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ರಾಮ್‌ಪ್ರಸಾದ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಡಿ.೧೭ರಂದು ಲೋಕಸಭಾ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ರಾಮ್‌ಪ್ರಸಾದ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಚಿಂತಕರ ಕೇಂದ್ರ ಗೃಹ ಸಚಿವರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನ ಏರ್ಪಡಿಸಿದ್ದರು.ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಲೋಕಸಭಾ ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ದೇಶದ ಎಲ್ಲಾ ದಲಿತ ಸಂಘ-ಸಂಸ್ಥೆಗಳು ಖಂಡಿಸುತ್ತೇವೆ. ದಲಿತರು ಶೋಷಣೆಗೆ ಒಳಗಾಗಿದ್ದಾಗ ಯಾವ ದೇವರು ಸಹ ನಮ್ಮನ್ನು ಕಾಪಾಡಲಿಲ್ಲ ಸಂವಿಧಾನವೊಂದೇ ದಲಿತರಿಗೆ ರಕ್ಷಣೆ ನೀಡಿ ಸಮಾನತೆ ಕಲ್ಪಿಸಿರುವುದು ಎಂದು ಆಕ್ರೋಶ ಹೊರಹಾಕಿದರು.ಪಪಂ ಸದಸ್ಯ ಕೆ.ಎನ್.ನಟರಾಜು ಮಾತನಾಡಿ ಸಚಿವರಾಗಿ ನೀವು ಆಯ್ಕೆಯಾಗಿದ್ದೀರ ಎಂದರೆ ಅದು ನಮ್ಮ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಎಂದು ಮರೆಯಬಾರದು, ಇದೆ ಸಂವಿಧಾನದಿಂದಲೇ ನೀವು ಗಡಿಪಾರು ಆಗಿರೋದು ಎನ್ನವುದನ್ನು ಮರೆಯಬಾರದು. ಅಂಬೇಡ್ಕರ್ ಅವರ ನೀಡಿದ ಕೊಡುಗೆಯನ್ನು ಯಾರು ಕೂಡ ಇಲ್ಲಿವರೆಗೂ ನೀಡಲು ಸಾಧ್ಯವಿಲ್ಲ. ಈ ದೇಶದ ಕೋಟ್ಯಾಂತರ ಅಂಬೇಡ್ಕರ್ ಅಭಿಮಾನಿಗಳಿಗೆ ನೋವು ಉಂಟು ಮಾಡಿದ್ದೀರ, ಅದಕ್ಕೆ ಅದೆ ಸಂಸತ್ ಸದನದಲ್ಲಿ ಅಂಬೇಡ್ಕರ್ ಪೋಟೋ ಕೊರಳಿಗೆ ಹಾಕಿಕೊಂಡು ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯ ಮಾಡಿದರು.ದಲಿತ ಮುಖಂಡ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ. ದಲಿತ ವಿರೋಧಿ ಬಿಜೆಪಿಯು ದೇಶಕ್ಕೆ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮಹಾಗ್ರಂಥಕ್ಕೆ ಅಪಮಾನ ಮಾಡುತ್ತಿದ್ದಾರೆ.. ಸಂವಿಧಾನದಿಂದಲೇ ಅಮಿತ್ ಶಾ ಜವಾಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು, ಸಂವಿಧಾನ ವಿರೋಧಿ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಎಂದು ಆಗ್ರಹ ಮಾಡಿದರು.ಈ ವೇಳೆ ಪ.ಪಂ ಸದಸ್ಯ ಕೆ.ಎನ್ ನಟರಾಜ್, ದಲಿತ ಮುಖಂಡರಾದ ಚಿಕ್ಕರಂಗಯ್ಯ, ಕಾಮರಾಜನಹಳ್ಳಿ ದೊಡ್ಡಯ್ಯ, ದಾಸರಹಳ್ಳಿ ಶಿವರಾಮ್, ಗುಂಡಿನಪಾಳ್ಯ ನರಸಿಂಹಮೂರ್ತಿ, ಮಾಜಿ ಸೈನಿಕ ನರಸಿಂಹಮೂರ್ತಿ, ಹೊಳವನಹಳ್ಳಿ ನರಸಿಂಹಮೂರ್ತಿ, ಗಂಗಣ್ಣ, ವಿಭೂತಿ ಸಿದ್ದಪ್ಪ, ಹರೀಶ್, ನಾಗರಾಜು, ನಾಗೇಶ್, ವೀರಕ್ಯಾತಯ್ಯ ಸೇರಿದಂತೆ ರೈತ ಪರ ಮತ್ತು ಪ್ರಗತಿಪರ ಚಿಂತಕರು ಹಾಜರಿದ್ದರು.

ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

ಇತ್ತೀಚಿಗೆ ದೆಹಲಿಯ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತಾ ಶಾ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆಯೇ ಅವಹೇಳನಕಾರಿ ಮಾತನಾಡಿದ್ದು, ಸಚಿವ ಅಮಿತ್ ಶಾ ಕೂಡಲೇ ಕ್ಷಮೆಯಾಚಿಸಿ, ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಂವಿಧಾನ ವಿರೋಧಿಯಾದ ಇವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದಲಿತ ಪರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ದೇಶದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ದಲಿತ ಮುಖಂಡರು ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಿದರು.

Share this article