ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆಗಾಗಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Aug 13, 2024, 12:55 AM IST
12ಕೆಎಂಎನ್ ಡಿ12 | Kannada Prabha

ಸಾರಾಂಶ

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರವೂ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವುದನ್ನು ಖಂಡಿಸಿ ಅಲ್ಲಿನ ಲಕ್ಷಾಂತರ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ರಕ್ಷಣೆಯಾಗ ಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ, ರಕ್ಷಣೆಗೆ ಆಗ್ರಹಿಸಿ ಹಿಂದೂ ಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಸೇರಿದ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್ತು, ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಮಾನವ ಸರಪಣಿ ನಿರ್ಮಿಸಿ ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಮಾಡುವಂತೆ ಘೋಷಣೆ ಕೂಗಿದರು.

ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರವೂ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರೆದಿರುವುದನ್ನು ಖಂಡಿಸಿ ಅಲ್ಲಿನ ಲಕ್ಷಾಂತರ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ರಕ್ಷಣೆಯಾಗ ಬೇಕಿದೆ ಎಂದು ಒತ್ತಾಯಿಸಿದರು.

ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ದೇಶದ ಎರಡನೇ ಅತಿದೊಡ್ಡ ನಗರ ಚಿತ್ತಗಾಂಗ್‌ನಲ್ಲಿ ನಡೆದ ಹಿಂದೂಗಳ ಬೃಹತ್ ಪ್ರತಿಭಟನೆಯಲ್ಲಿ ಲಕ್ಷಾಂತರ ಹಿಂದೂಗಳು ಪಾಲ್ಗೊಂಡು ಎಚ್ಚರಿಸಿರುದಕ್ಕೆ ಭಾರತ ದೇಶದ ಹಿಂದುಗಳ ಬೆಂಬಲವಿದೆ ಎಂದರು.

ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಆ.5ರಂದು ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205ಕ್ಕೂ ಹೆಚ್ಚು ದಾಳಿ ಘಟನೆಗಳನ್ನು ಎದುರಿಸಿದ್ದಾರೆ. ಹಿಂದೂಗಳು ತಮ್ಮ ಮನೆಗಳು ಮತ್ತು ವ್ಯವಹಾರಗಳ ಮೇಲಿನ ದಾಳಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರನ್ನು ರಕ್ಷಿಸಿ ಎಂದು ಮನವಿ ಮಾಡಿದರು.

ಹಲವು ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಲಾಗಿದೆ. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಇಬ್ಬರು ಹಿಂದೂ ನಾಯಕರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಸಾವಿರಾರು ಬಾಂಗ್ಲಾದೇಶಿ ಹಿಂದೂಗಳು ಭಾರತಕ್ಕೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಹಿಂದು ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವವರ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಮಂಡಳಿಗಳ ರಚನೆ, ಅಲ್ಪಸಂಖ್ಯಾತರಿಗೆ ಶೇ.10ರಷ್ಟು ಸಂಸದೀಯ ಸ್ಥಾನಗಳ ಹಂಚಿಕೆ ಮತ್ತು ಇತರರೊಂದಿಗೆ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಾನೂನು ಜಾರಿಗೆ ಒತ್ತಾಯಿಸಿದರು.

ಬಾಂಗ್ಲಾದೇಶದಿಂದ ನುಸುಳಿಕೊಂಡು ಬಂದು ಮಂಡ್ಯ ನೆಲದಲ್ಲಿ ಸಾವಿರಾರು ಮಂದಿ ಇದ್ದಾರೆ. ಅವರನ್ನು ಗುರುತಿಸಿ ಮತ್ತೆ ಅವರನ್ನು ಬಾಂಗ್ಲಾದೇಶಕ್ಕೆ ಕಳಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ಶೀಪಾದು, ಸೃಜನ್, ಬಾಲು, ದೊಡ್ಡಚಾರ್, ರವಿ, ಪುನೀತ್, ಭೀಮೇಶ್, ಮಂಜು, ಬಿಜೆಪಿ ಮುಖಂಡರಾದ ಎಚ್.ಆರ್.ಅರವಿಂದ್, ವಿವೇಕ್, ವಸಂತ್, ಹೊಸಹಳ್ಳಿಶಿವು, ಮಾದರಾಜೇ ಅರಸ್, ನಂದೀಶ್, ಎಲ್ಲೆಗೌಡ, ಪುಟ್ಟಸ್ವಾಮಿ, ಜವರೇಗೌಡ ಮತ್ತಿತರರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ