ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಟೌನ್ ಶಿಪ್ ಯೋಜನೆಗಾಗಿ ನಡೆಯುತ್ತಿರುವ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಪ್ರದರ್ಶಿಸಿ ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಗ್ರೇಟರ್ ಬೆಂಗಳೂರು ಎಂಬುದು ನರಕ ಸೃಷ್ಟಿ. ಇದೊಂದು ದರೋಡೆಯಾಗಿದ್ದು, ಬಿಡದಿ ಉಪನಗರ ನಿರ್ಮಾಮ ಬೇಡವೇ ಬೇಡ ಎಂದು ಒತ್ತಾಯಿಸಿದರು.ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ , ಬಿಡದಿ ಭೂಸ್ವಾಧೀನದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಯಬೇಕಿದೆ. ಈ ಹೋರಾಟ ಒಂದು ದಿನಕ್ಕೆ ನಡೆದರೆ ಸಾಲುವುದಿಲ್ಲ. ರಾಜ್ಯದ ಉದ್ದಗಲದಲ್ಲಿ ಹೋರಾಟ ಸಂಘಟಿಸಬೇಕು. ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು. ಈ ಬಲವಂತದ ಭೂಸ್ವಾಧೀನದ ವಿರುದ್ಧ ಜೈಲು ತುಂಬುವ ಚಳವಳಿ ನಡೆಯಲಿ ನಾನೇ ಮುಂದೆ ನಿಂತು ಜೈಲಿಗೆ ಹೋಗಲು ಸಿದ್ದವಿದ್ದೇನೆ ಎಂದರು.
ಈಗಾಗಲೇ ಬೆಂಗಳೂರು ತಮಿಳು, ತೆಲುಗು, ಸಿಂಧಿ,ಮರಾಠಿ ಹಾಗೂ ಹಿಂದಿಭಾಷಿಕರ ನೆಲೆಯಾಗಿ ಪರಿಣಮಿಸಿದೆ. ಪರಭಾಷಿಕರಿಂದ ತುಂಬಿರುವ ಬೆಂಗಳೂರನ್ನು ಸರ್ಕಾರ ಗ್ರೇಟರ್ ಬೆಂಗಳೂರು ಎಂದು 5 ಭಾಗ ಮಾಡಿ ಕನ್ನಡಿಗರ ಅಸ್ಮಿತೆಗೆ ದಕ್ಕೆತರುವ ಕೆಲಸ ಮಾಡಿದೆ. ಇವರಿಗೆ ಇಡಲು ಒಂದು ಕನ್ನಡ ಹೆಸರು ಸಿಗಲಿಲ್ಲವೇ ಎಂದು ಕಿಡಿಕಾರಿದ ವಾಟಾಳ್, ಬೆಂಗಳೂರನ್ನು ಪರಭಾಷಿಕರಿಂದ ತುಂಬಿರುವ ಸರ್ಕಾರ ಇದೀಗ ಬಿಡದಿಭಾಗದಲ್ಲಿ ಪರಭಾಷಿಕರನ್ನು ತುಂಬಲು ಮುಂದಾಗಿದೆ. ಈ ಮೂಲಕ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ರೈತರು ಹಾಗೂ ಕನ್ನಡಾಭಿಮಾನಿಗಳು ಈ ಹುನ್ನಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆನೀಡಿದರು.ಪ್ರತಿಭಟನೆಯಲ್ಲಿ ಕರುನಾಟ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ತಾಲೂಕು ಅಧ್ಯಕ್ಷ ಗಂಗಾಧರ್ ವಿ.ಎನ್., ತಾಲೂಕು ಮಹಿಳಾಧ್ಯಕ್ಷೆ ಭಾಗ್ಯಸುಧಾ, ಜಿಲ್ಲಾ ದಲಿತರಘಟಕದ ಅಧ್ಯಕ್ಷ ಕೆ.ಜಯರಾಮು, ಪದಾಧಿಕಾರಿಗಳಾದ ಕುಮಾರ್, ಶಿವಮೂರ್ತಿ, ಪಿ.ಸುರೇಶ್ ಕೊತ್ತೀಪುರ, ಕೆಂಪರಾಜು, ವಾಟಾಳ್ ನಾಗರಾಜು ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ, ಮಹದೇವ್ ಮತ್ತಿತರರು ಭಾಗವಹಿಸಿದ್ದರು.