ಅವಧಿಗೂ ಮುನ್ನ ಆರಂಭವಾದ ಮಳೆಯಿಂದ ಸಮಸ್ಯೆ

KannadaprabhaNewsNetwork |  
Published : May 26, 2025, 12:08 AM IST
25ಎಚ್ಎಸ್ಎನ್7 : ತಡೆಗೋಡೆ ಕುಸಿದಿರುವುದು. ಹೆದ್ದಾರಿ ಕಾಮಗಾರಿ ನಡೆದಿರುವುದು. | Kannada Prabha

ಸಾರಾಂಶ

ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್ ಕಂಪನಿಯ ನೀಡಿರುವ ಗುತ್ತಿಗೆ ಅವಧಿ ೨೦೨೩ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಿದ್ದು, ಈ ಅವಧಿಯ ವೇಳೆಗೆ ಸಕಲೇಶಪುರದವರೆಗಿನ ೩೫ ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದ್ದು ಸಕಲೇಶಪುರದಿಂದ- ಹೆಗ್ಗದ್ದೆ ಗ್ರಾಮದವರೆಗಿನ ಕಾಮಗಾರಿ ಸದ್ಯ ಪ್ರಗತಿಯ ಹಂತದಲ್ಲಿದೆ. ಈ ಬಾರಿಯ ಮಳೆಗಾಲದ ವೇಳೆಗೆ ಕಾಮಗಾರಿ ಮುಗಿಸುವ ಗುರಿಯೊಂದಿಗೆ ಬೇಸಿಗೆಯಲ್ಲಿ ಶರವೇಗದಲ್ಲಿ ಕಾಮಗಾರಿ ನಡೆಸಲಾಯಿತಾದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರಾಷ್ಟ್ರಿಯ ಹೆದ್ದಾರಿ ೭೫ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಮಳೆಗಾಲದಲ್ಲಿ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆ ಸೃಷ್ಟಿಸುವುದು ನಿಶ್ಚಿತವಾಗಿದೆ. ಹಾಸನ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗ್ಗದ್ದೆ ಗ್ರಾಮದ ಹೊರವಲಯದವರಗಿನ ೪೫ ಕಿ.ಮೀ. ರಸ್ತೆ ಚತುಷ್ಪಥಕ್ಕೆ ೨೦೧೬ರಲ್ಲಿ ಟೆಂಡರ್ ಕರೆಯಲಾಗಿದ್ದು ೨೦೧೯ರ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪನಿ ಯಾವುದೆ ಮುಂದಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ ೪೫ ಕಿ.ಮೀ. ರಸ್ತೆಯನ್ನು ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂಕುಸಿತಕ್ಕೆ ಕಾರಣವಾಗಿತ್ತು. ಹೆದ್ದಾರಿ ಕಾಮಗಾರಿ ಆರಂಭವಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ವಹಣೆಯನ್ನು ಕೈಬಿಟ್ಟರೆ ಇತ್ತ ರಸ್ತೆ ನಿರ್ಮಾಣದ ಹೊಣೆ ಹೊತ್ತ ಗುತ್ತಿಗೆದಾರರು ನಿರ್ವಹಣೆಯ ಹೊಣೆಯಿಂದ ನುಣುಚಿಕೊಂಡ ಪರಿಣಾಮ ೪೫ ಕಿ.ಮೀ. ರಸ್ತೆಯಲ್ಲಿ ನಿರ್ಮಾಣವಾಗಿದ್ದ ಹೊಂಡಗಳು ಲೆಕ್ಕಕ್ಕೆ ಸಿಗದಂತಾಗಿತ್ತು. ಪರಿಣಾಮ ಹಾಸನದಿಂದ ಸಕಲೇಶಪುರದವರೆಗಿನ ೪೦ ಕಿ.ಮೀ. ಸಂಚಾರಕ್ಕೆ ಎರಡು ಗಂಟೆಗಳ ಸಮಯ ಹಿಡಿಯುತ್ತಿದ್ದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿತ್ತು. ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಹೊಂಡಗಳನ್ನು ಮುಚ್ಚಲು ಬೃಹತ್ ಪ್ರತಿಭಟನೆಗಳನ್ನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಕಾಮಗಾರಿ ಕೈಗೆತ್ತಿಕೊಂಡಿರುವ ರಾಜ್‌ಕಮಲ್ ಕಂಪನಿಯ ನೀಡಿರುವ ಗುತ್ತಿಗೆ ಅವಧಿ ೨೦೨೩ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡಿದ್ದು, ಈ ಅವಧಿಯ ವೇಳೆಗೆ ಸಕಲೇಶಪುರದವರೆಗಿನ ೩೫ ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದ್ದು ಸಕಲೇಶಪುರದಿಂದ- ಹೆಗ್ಗದ್ದೆ ಗ್ರಾಮದವರೆಗಿನ ಕಾಮಗಾರಿ ಸದ್ಯ ಪ್ರಗತಿಯ ಹಂತದಲ್ಲಿದೆ. ಈ ಬಾರಿಯ ಮಳೆಗಾಲದ ವೇಳೆಗೆ ಕಾಮಗಾರಿ ಮುಗಿಸುವ ಗುರಿಯೊಂದಿಗೆ ಬೇಸಿಗೆಯಲ್ಲಿ ಶರವೇಗದಲ್ಲಿ ಕಾಮಗಾರಿ ನಡೆಸಲಾಯಿತಾದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಸಕಲೇಶಪುರ-ಹೆಗ್ಗದ್ದೆ ನಡುವಿನ ೧೦ ಕಿ.ಮೀ. ರಸ್ತೆ ಶೇ. ೭೦ರಷ್ಟು ಕಾಮಗಾರಿ ಮುಗಿದ್ದಿದ್ದು ಭಾರಿ ಪ್ರಮಾಣದ ಭೂಕುಸಿತಕ್ಕೆ ಸಾಕ್ಷಿಯಾಗಿರುವ ದೊಡ್ಡತಪ್ಪಲೆ ಗ್ರಾಮ ಸಮೀಪ ಸುಮಾರು ೨ ಕಿ.ಮೀ. ರಸ್ತೆ ಕಾಮಗಾರಿ ಬಾಕಿ ಉಳಿದಿದ್ದು ಈ ಪ್ರದೇಶದಲ್ಲಿ ತಡೆಗೋಡೆ ಹಾಗೂ ರೈಲ್ವೆ ರಸ್ತೆ ಬರುವುದರಿಂದ ಹೆದ್ದಾರಿಯನ್ನು ಎತ್ತಿರಿಸುವ ಕಾಮಗಾರಿ ನಡೆಸಲಾಗುತ್ತಿದೆ. ಇದಲ್ಲದೆ ದೋಣಿಗಾಲ್ ಗ್ರಾಮ ಸಮೀಪ ಕಳೆದ ನಾಲ್ಕುವರ್ಷಗಳ ಹಿಂದೆ ಬಹುತೇಕ ಹೆದ್ದಾರಿ ಕುಸಿದಿದ್ದು ಇಲ್ಲಿ ರಸ್ತೆ ಮರು ನಿರ್ಮಾಣ ಮಾಡುವುದು ಗುತ್ತಿಗೆದಾರರಿಗೆ ಸವಾಲಾಗಿದ್ದು ಇಂದಿಗೂ ಕಾಮಗಾರಿ ಆರಂಭಿಸಲಾಗಿಲ್ಲ. ಹೆದ್ದಾರಿಯ ಒಂದು ಬದಿ ಸುಮಾರು ನಾಲ್ಕು ನೂರು ಮೀಟರ್‌ಗೂ ಅಧಿಕ ಕುಸಿದಿದ್ದು ಕಡಿದಾದ ಪ್ರಪಾತದಲ್ಲಿ ರಸ್ತೆ ನಿರ್ಮಾಣಮಾಡುವುದು ಗುತ್ತಿಗೆದಾರರಿಗೆ ಸವಾಲಾಗಿದೆ. ಕಳೆದ ಬಾರಿ ಇಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಭೂಕುಸಿತವಾಗಿರಲಿಲ್ಲ. ಆದರೆ, ಈ ಬಾರಿ ಈಗಾಗಲೇ ಭೂಕುಸಿತದ ಸುಳಿವು ಗೋಚರಿಸುತ್ತಿದ್ದು ಅಲ್ಲಲ್ಲಿ ಬಿರುಕುಗಳು ಮೂಡಲಾರಂಭಿಸಿವೆ. ಬೇಕಿದೆ ಬಲಿಷ್ಠ ತಡೆಗೋಡೆ:

ಅವಧಿ ಪೂರ್ವಮುಂಗಾರು ಮಳೆ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿದ್ದು ಇದರೊಂದಿಗೆ ಗಾಳಿ ಬೀಸುತ್ತಿರುವುದರಿಂದ ಈಗಾಗಲೇ ಹೆದ್ದಾರಿಯ ಹಲವೆಡೆ ಭೂಕುಸಿತ ಸಂಭವಿಸಿದೆ. ದೊಡ್ಡತಪ್ಪಲೆ ಗ್ರಾಮ ಸಮೀಪದ ಒಂದು ಬದಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಡಿದಾಗಿ ಮಣ್ಣು ತೆಗೆದಿದ್ದು ಭಾರಿ ಪ್ರಮಾಣದ ಭೂಕುಸಿತಕ್ಕೆ ದಾರಿಯಾಗಿದೆ. ಈ ಬಾರಿ ಈ ಪ್ರದೇಶದಲ್ಲಿ ಅತಿಹೆಚ್ಚು ಭೂಕುಸಿತವಾಗಿವ ಸಾಧ್ಯತೆ ಇದ್ದು, ಜೇಡಿ ಮಣ್ಣುಹೊಂದಿರುವ ಭೂಮಿ ಕುಸಿಯುವುದು ನಿಶ್ಚಿತ ಎಂಬುದು ಸ್ಥಳೀಯರ ಮಾತು. ಈ ಬಾರಿ ಹಿಂದಿಗಿಂತ ಭಾರಿ ಪ್ರಮಾಣದಲ್ಲಿ ಗುಡ್ಡಕುಸಿಯಲಿದ್ದು ಕನಿಷ್ಠ ೧೦ ಎಕರೆಗೂ ಅಧಿಕ ಉಡ್ಡ ರೈಲ್ವೆ ರಸ್ತೆಗೆ ಜಾರಲಿದೆ ಎಂಬ ಮಾತಿದ್ದು, ಇದರಿಂದಾಗಿ ಹೆದ್ದಾರಿ ಮಾತ್ರವಲ್ಲದೆ ರೈಲ್ವೆ ಪ್ರಯಾಣಕ್ಕೂ ತೊಡಕಾಗುವುದು ನಿಶ್ಚಿತವಾಗಿದೆ. ಭೂಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ನಿರ್ಮಾಣ ಮಾಡುತ್ತಿರುವ ತಡೆಗೋಡೆ ಕಾಮಗಾರಿ ತೀರ ಕಳಪೆಯಾಗಿದ್ದು, ಕಲ್ಲುಗಳನ್ನು ಬಳಸಿ ಆರು ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗುತ್ತಿದ್ದು ಕಳೆದ ನಾಲ್ಕು ದಿನಗಳ ಮಳೆಗೆ ಈ ತಡೆಗೋಡೆ ಹಲವೆಡೆ ಕುಸಿದಿದ್ದು ಕಳಪೆ ಕಾಮಗಾರಿಗೆ ಸಾಕ್ಷಿ ಒದಗಿಸುತ್ತಿದೆ. ಭಾರಿ ಅಂತರ್ಜಲ:

ಪ್ರತಿವರ್ಷ ಭೂಕುಸಿತವಾಗುತ್ತಿರುವ ದೊಡ್ಡತಪ್ಪಲೆ ಪ್ರದೇಶದಲ್ಲಿ ಬೇಸಿಗೆಯಲ್ಲೂ ಭಾರಿ ಪ್ರಮಾಣದ ಅಂತರ್ಜಲ ಹರಿಯುತ್ತಿದ್ದು, ಮಣ್ಣು ಸಡಿಲಗೊಳ್ಳಲು ಮತ್ತೊಂದು ಕಾರಣವಾಗಿದೆ.ಕಾಮಗಾರಿ ನಿಧಾನಕ್ಕೆ ಕಾರಣ:

ಹೆಗ್ಗದ್ದೆ ಸಕಲೇಶಪುರ ನಡುವಿನ ಸುಮಾರು ೧೦ ಕಿ.ಮೀ. ಪೈಕಿ ಈಗಾಗಲೇ ೭ ಕಿ.ಮೀ.ನಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಹೆದ್ದಾರಿಯಲ್ಲಿ ಭಾರಿ ವಾಹನಗಳು ಸಂಚರಿಸುವ ಪರಿಣಾಮ ಕಾಮಗಾರಿ ವೇಗ ಹೆಚ್ಚಿಸಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೆದ್ದಾರಿ ಬಂದ್ ಮಾಡಿ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಗುತ್ತಿಗೆದಾರರು ಮನವಿ ಮಾಡಿದ್ದರು. ಆದರೆ, ಹೆದ್ದಾರಿ ಸಂಚಾರ ಬಂದ್‌ಗೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸದ ಪರಿಣಾಮ ಕಾಮಗಾರಿ ಪೂರ್ಣಗೊಳಿಸಲು ಹಿನ್ನಡೆಯಾಗಿದೆ ಎಂಬ ಮಾತಿದೆ. ಸೇತುವೆ ಸಿದ್ಧ:

ಎತ್ತಿನಹಳ್ಳ ಗ್ರಾಮ ಸಮೀಪ ಎತ್ತಿನಹೊಳೆಗೆ ನಿರ್ಮಿಸಿದ್ದ ಸೇತುವೆ ಬಹುತೇಕ ಕುಸಿಯುವ ಹಂತಕ್ಕೆ ತಲುಪಿತ್ತು. ಕಳೆದ ಮಳೆಗಾಲದಲ್ಲಿ ಸೇತುವೆ ಮೇಲ್ಪಾಗದಲ್ಲಿ ಮಂಡಿಯುದ್ದ ನೀರು ಹಾಗೂ ಭಾರಿ ಗಾತ್ರದ ಹೊಂಡಗಳು ನಿರ್ಮಾಣವಾಗಿದ್ದು ಸೇತುವೆ ಅಪಾಯಕಾರಿಯಾಗಿತ್ತು. ಆದರೆ, ಬೇಸಿಗೆಯ ನಾಲ್ಕು ತಿಂಗಳ ಅವಧಿಯಲ್ಲಿ ಮತ್ತೊಂದು ಹೊಸ ಸೇತುವೆ ನಿರ್ಮಾಣ ಮಾಡುವ ಮೂಲಕ ಹಳೇ ಸೇತುವೆಯ ಮೇಲಿನ ಒತ್ತಡ ಕಡಿಮೆಗೊಳಿಸಲಾಗಿದ್ದರೆ. ಹಳೇ ಸೇತುವೆಯನ್ನು ದುರಸ್ತಿಗೊಳಿಸಲಾಗಿದೆ. ಸದ್ಯ ಮಳೆಯ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಕಳೆದ ನಾಲ್ಕುದಿನಗಳಿಂದ ಸ್ಥಗಿತಗೊಳಿಸಲಾಗಿದೆ.ಅಧಿಕಾರಿಗಳ ಭೇಟಿ:

ಅವಧಿಪೂರ್ವ ಮುಂಗಾರು ಮಳೆಯಿಂದಾಗಿ ಹೆದ್ದಾರಿ ಸ್ಥಿತಿ ಅವಲೋಕನ ನಡೆಸಲು ಹಾಗೂ ಪೂರ್ವ ಸಿದ್ದತೆಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆಯಂತೆ ಭಾನುವಾರ ಉಪವಿಭಾಗಾಧಿಕಾರಿ ಡಾ.ಶೃತಿ ಹಾಗೂ ತಹಸೀಲ್ದಾರ್‌ ಅರವಿಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. * ಹೇಳಿಕೆ 1

ಜಿಲ್ಲಾಡಳಿತದ ನಿರ್ದೇಶನದಂತೆ ಹೆದ್ದಾರಿಯ ಸ್ಥಿತಿಯನ್ನು ಪರಾಮರ್ಶೆ ನಡೆಸಲಾಗಿದ್ದು ಹೆಚ್ಚಿನ ಮಳೆಯಾದರೆ ಭೂಕುಸಿತವಾಗುವ ಸಾಧ್ಯತೆ ಇದೆ.

- ಡಾ. ಎಂ.ಕೆ ಶೃತಿ, ಉಪವಿಭಾಗಾಧಿಕಾರಿ, ಸಕಲೇಶಪುರ

* ಹೇಳಿಕೆ 2

ದೊಡ್ಡತಪ್ಪಲೆ ಗ್ರಾಮದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಮಣ್ಣು ಕುಸಿಯುವುದು ನಿಶ್ಚಿತವಾಗಿದೆ.

- ಸುರೇಶ್, ದೊಡ್ಡತಪ್ಪಲೆ ಗ್ರಾಮದ ನಿವಾಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ