ಸಮಸ್ಯೆ ಮುಕ್ತ ಭಾರತ ಇಂದಿನ ತುರ್ತು ಅಗತ್ಯ

KannadaprabhaNewsNetwork | Published : Apr 23, 2024 12:50 AM

ಸಾರಾಂಶ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಭಾರಿ ಭರವಸೆಗಳನ್ನು ಕೊಡುತ್ತಿವೆ. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. ಆದರೆ ಜನರಿಗೆ ಬೇಕಿರುವುದು ಕಾಂಗ್ರೆಸ್ ಮುಕ್ತ ಭಾರತವಲ್ಲ ಸಮಸ್ಯೆಗಳಿಂದ ಮುಕ್ತವಾದ ಭಾರತ.

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಭಾರಿ ಭರವಸೆಗಳನ್ನು ಕೊಡುತ್ತಿವೆ. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಾಣ ಮಾಡುವುದಾಗಿ ಹೇಳುತ್ತಿದೆ. ಆದರೆ ಜನರಿಗೆ ಬೇಕಿರುವುದು ಕಾಂಗ್ರೆಸ್ ಮುಕ್ತ ಭಾರತವಲ್ಲ ಸಮಸ್ಯೆಗಳಿಂದ ಮುಕ್ತವಾದ ಭಾರತ. ವಿರೋಧ ಪಕ್ಷಗಳನ್ನೇ ನಿರ್ಮೂಲನೆ ಮಾಡುವ ಮಾತನಾಡುವುದು ಅಪ್ರಜಾತಾಂತ್ರಿಕವಾಗುತ್ತದೆ ಎಂದು ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಹೇಳಿದರು.

ಪಕ್ಷದ ಅಭ್ಯರ್ಥಿ ಡಿ.ಸುಜಾತ ಅವರ ಚುನಾವಣಾ ಪ್ರಚಾರದ ಅಂಗವಾಗಿ ಜೋಗಿಮಟ್ಟಿ ವೃತ್ತದಲ್ಲಿ ಸೋಮವಾರ ನಡೆದ ಬೀದಿ ಬದಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಬಂತೆಂದರೆ ಬಣ್ಣ ಬಣ್ಣದ ಆಶ್ವಾಸನೆಗಳನ್ನು ನೀಡುವ ಪಕ್ಷಗಳು ಅನಂತರ ತಮ್ಮ ಮಾತುಗಳನ್ನು ಮರೆತುಬಿಡುತ್ತಾರೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುವ ಭರವಸೆಯೊಂದಿಗೆ ಆಡಳಿತಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಇಂದು ಚುನಾವಣಾ ಬಾಂಡ್‍ಗಳ ಮೂಲಕ ವ್ಯವಸ್ಥಿತ ಭ್ರಷ್ಟಾಚಾರ ನಡೆಸಿದೆ. 6,930 ಕೋಟಿ ರು. ತನ್ನ ಪಕ್ಷದ ನಿಧಿಗೆ ಹಣ ಸಂಗ್ರಹಿಸಿದೆ ಎಂದರು.

ದೇಣಿಗೆ ವಿಷಯದಲ್ಲಿ ಉಳಿದ ಪಕ್ಷಗಳೇನು ಹಿಂದೆ ಬಿದ್ದಿಲ್ಲ. ಕಾಂಗ್ರೆಸ್, ಟಿಎಂಸಿ, ಬಿಆರ್‌ಎಸ್ ಪಕ್ಷಗಳು 1100 ಕೋಟಿ ರು.ಗಳಿಗೂ ಅಧಿಕ ಮೊತ್ತದ ಹಣವನ್ನು ಸಂಗ್ರಹಿಸಿವೆ. ಖಾಸಗಿ ಬಂಡವಾಳಗಾರರಿಂದ ಸಂಗ್ರಹಿಸುವ ಮೊತ್ತವನ್ನು ಈ ಪಕ್ಷಗಳು ಗೆದ್ದು ಬಂದ ನಂತರ ಅವರ ಸೇವೆಯನ್ನು ಮಾಡುತ್ತಾರೆಯೇ ಹೊರತು ಜನ ಸೇವೆ ಮರೆಯುತ್ತಾರೆ ಎಂದರು.

ಚುನಾವಣೆ ಬಂತೆಂದರೆ ಪರಸ್ಪರ ರಾಜಕೀಯ ಕೆಸರೆರೆಚಾಟ ಮಾಡಿಕೊಳ್ಳುತ್ತಿವೆ. ಬಿಜೆಪಿ ರಾಜ್ಯಕ್ಕೆ ನೀಡಿದ್ದು, ಕೇವಲ ಚೊಂಬು ಎಂದು ಕಾಂಗ್ರೆಸ್ ಹೇಳಿದರೆ, ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಈಗ ನೀಡುತ್ತಿರುವುದು ಕೇವಲ ಚಿಪ್ಪು ಎಂದು ಬಿಜೆಪಿ ಹೇಳುತ್ತಿದೆ. ಹೀಗೆ ಪರಸ್ಪರ ಚೊಂಬು-ಚಿಪ್ಪು ಎಂದು ಬದ್ಧ ವೈರಿಗಳಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ ಇವರು ಅಧಿಕಾರದಲ್ಲಿದ್ದಾಗ ಅನುಸರಿಸುತ್ತಿರುವ ನೀತಿಗಳು ಮಾತ್ರ ಒಂದೇ ಆಗಿವೆ. ಜನವಿರೋಧಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ನೀತಿಗಳನ್ನು ಈ ಹಿಂದೆ ನಮ್ಮನ್ನಾಳುತ್ತಿದ್ದ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿತ್ತು. ಅದೇ ನೀತಿಗಳನ್ನು ಬಿಜೆಪಿ ಪಕ್ಷ ಕಳೆದ ಹತ್ತು ವರ್ಷಗಳಿಂದ ಇನ್ನು ವ್ಯಾಪಕವಾಗಿ ಅನುಷ್ಠಾನಕ್ಕೆ ತಂದಿದೆ. ಜನರು ತಮ್ಮ ನೈಜ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುವ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.

ವ್ಯಕ್ತಿಗಳನ್ನು ನೋಡಿ ಮತ ಚಲಾಯಿಸುವ ಮನೋಭಾವವನ್ನು ಮತದಾರ ಕೈಬಿಡಬೇಕು. ಅವರು ಪ್ರತಿನಿಧಿಸುವ ಪಕ್ಷ ಮತ್ತು ಅನುಸರಿಸುವ ನೀತಿಗಳು ಜನಪರವಾಗಿವೆಯೇ ಇಲ್ಲವೇ ಎಂಬುದೇ ಮುಖ್ಯ. ಈ ದೃಷ್ಟಿಯಲ್ಲಿ ಎಲ್ಲಾ ದೊಡ್ಡ ರಾಷ್ಟ್ರೀಯ ಪಕ್ಷಗಳು ಜನ ವಿರೋಧಿ ನೀತಿಗಳನ್ನೇ ಅನುಸರಿಸಿವೆ ಮತ್ತು ಅನುಸರಿಸುತ್ತಿವೆ. ನೈಜ ಜನಪರ ಹೋರಾಟದ ದನಿಯನ್ನು ಸಂಸತ್ತಿನಲ್ಲಿ ಮೊಳಗಿಸಲು ಹೊರಟ ಎಸ್‍ಯುಸಿಐನ ಅಭ್ಯರ್ಥಿ ಡಿ.ಸುಜಾತ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಎಸ್‍ಯುಸಿಐ ಪಕ್ಷದ ರಾಜ್ಯ ಮುಖಂಡ ಎಂ.ಎನ್.ಮಂಜುಳಾ, ಚಿತ್ರದುರ್ಗ ಜಿಲ್ಲಾ ಮುಖಂಡ ರವಿಕುಮಾರ್, ಕುಮುದಾ ಇದ್ದರು.

Share this article