ಚಿಕ್ಕಮಗಳೂರು ನಗರದಲ್ಲಿ ಇಂದು ಶೋಭಾಯಾತ್ರೆ

KannadaprabhaNewsNetwork |  
Published : Dec 13, 2024, 12:49 AM IST
ಪ್ರತಿಕೂಲ ಹವಮಾನದ ನಡುವೆಯೇ ದತ್ತಪೀಠಕ್ಕೆ ಮಹಿಳೆಯರು ಗುರುವಾರ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶುಕ್ರವಾರ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.

ಸಂಕೀರ್ತನಾ ಯಾತ್ರೆಗೆ ತೆರೆ । ತುಂತುರು ಮಳೆಯಲ್ಲು ದತ್ತ ಪಾದುಕೆ ದರ್ಶನ ಪಡೆದ ಮಾತೆಯರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶುಕ್ರವಾರ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಯಲಿದೆ.

ದತ್ತಪೀಠವೂ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಪ್ರತಿಕೂಲ ಹವಾಮಾನ, ದಟ್ಟ ಮೋಡ. ಆಗಾಗ ತುಂತುರು ಮಳೆ. ಬೆಳಿಗ್ಗೆಯಿಂದ ಯಾವ ಭಾಗದಲ್ಲೂ ಬಿಸಿಲು ಕಾಣದ ಸ್ಥಿತಿಯಲ್ಲೂ ಸಂಕೀರ್ತನಾ ಯಾತ್ರೆ ಹಾಗೂ ಅನಸೂಯ ಜಯಂತಿಯಲ್ಲಿ ಪಾಲ್ಗೊಳ್ಳಲು ಕಳೆದ ವರ್ಷಕ್ಕಿಂತ ಹೆಚ್ಚುಮಂದಿ ಮಹಿಳೆಯರು ಜಿಲ್ಲೆಯ ವಿವಿಧೆಡೆ ಯಿಂದ ಆಗಮಿಸಿದ್ದರು. ಕಡೂರಿನಿಂದ ಆಗಮಿಸಿದ್ದವರ ಸಂಖ್ಯೆ ಅಧಿಕವಾಗಿತ್ತು.

ಸಂಕೀರ್ತನಾ ಯಾತ್ರೆ ನಂತರ ದತ್ತಪೀಠದಲ್ಲೂ ಮೋಡ, ನಿರಂತರ ಸುರಿಯುತ್ತಿದ್ದ ತುಂತುರು ಮಳೆ, ಗಾಳಿ ನಡುವೆ ಸರದಿ ಸಾಲಿನಲ್ಲಿ ಮಹಿಳೆಯರು ನಿಂತು ದತ್ತಪಾದುಕೆಗಳ ದರ್ಶನ ಪಡೆದರು. ನಂತರ ಪೀಠದ ಹೊರ ಭಾಗದಲ್ಲಿ ನಡೆದ ಪೂಜೆಯಲ್ಲೂ ಪಾಲ್ಗೊಂಡರು.

ಶುಕ್ರವಾರ ಬೆಳಿಗ್ಗೆ ದತ್ತಮಾಲಾಧಾರಿಗಳು ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಲಿದ್ದಾರೆ. ನಂತರ ಮಧ್ಯಾಹ್ನ 2.30ಕ್ಕೆ ಶ್ರೀ ಕಾಮಧೇನು ಗಣಪತಿ ದೇವಾಲಯದಿಂದ ಶೋಭಾಯಾತ್ರೆ ಹೊರಡಲಿದೆ. ಈ ಯಾತ್ರೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.

ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ ಮೂಲಕ ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯಲ್ಲಿ ಸಾಗಿ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ಇದೇ ಸ್ಥಳದಲ್ಲಿ ಸಂಜೆ 6 ಕ್ಕೆ ಶ್ರೀ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಕುಕ್ಕೆ ಕ್ಷೇತ್ರದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಎಚ್‌ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ವಿಎಚ್‌ಪಿ ರಾಜ್ಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ ಹಾಗೂ ಭಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್‌ ಸೂರ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಶೋಭಾಯಾತ್ರೆ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ. ಯಾತ್ರೆ ಸಾಗುವ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರ ನಿಷೇಧಿಸಲಾಗಿದೆ. 12 ಕೆಸಿಕೆಎಂ 2

ಪ್ರತಿಕೂಲ ಹವಮಾನದ ನಡುವೆಯೇ ದತ್ತಪೀಠಕ್ಕೆ ಮಹಿಳೆಯರು ಗುರುವಾರ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ