ಕನ್ನಡಪ್ರಭ ವಾರ್ತೆ ಮೈಸೂರು
ಈ ಕಾರ್ಯಕ್ರಮದಲ್ಲಿ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತ್ ಕುಮಾರ್ ಮಾತನಾಡಿ, ಕೃಷಿ ವಿವಿ ಅಭಿವೃದ್ಧಿ ಪಡಿಸಿದ ಭತ್ತದ ತಳಿಗಳ ಬಗ್ಗೆ, ಬೇಸಿಗೆ ಭತ್ತದ ಸಸಿಮಡಿ ನಿರ್ವಹಣೆಯಲ್ಲಿ ಮೊಳಕೆ ಕಟ್ಟಿ ಬಿತ್ತನೆ ಮಾಡಿದ ಸಸಿಮಡಿಗಳ ಮೇಲೆ ಪಾರದರ್ಶಕ ಪಾಲಿಥೀನ್ ಹಾಳೆ (300 ಗೇಜ್) ಅನ್ನು ಸುಮಾರು 15 ದಿವಸಗಳವರೆಗೆ ಹೊದಿಸುವುದರಿಂದ ಚಳಿಯಿಂದ ಬೆಳವಣಿಗೆ ಕುಂಠಿತವಾಗುವ ಸಮಸ್ಯೆ ನಿವಾರಿಸಬಹುದು ಎಂದರು.
ಬೇಸಿಗೆ ಬೆಳೆಯನ್ನು ಜನವರಿ 3 ಮತ್ತು 4ನೇ ವಾರ ಸಸಿಮಡಿ ತಯಾರಿಸುವುದು ಹಾಗೂ ಫೆಬ್ರವರಿ 2 ಮತ್ತು 3ನೇ ವಾರ ನಾಟಿ ಮಾಡಲು ಸೂಕ್ತ ಸಮಯ. ಮಣ್ಣು ಪರೀಕ್ಷೆ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳ ಪ್ರಮಾಣ ಬದಲಾಯಿಸಿ ಕೊಳ್ಳಬಹುದು, ಸತುವಿನ ಸಲ್ಫೇಟ್ ಅನ್ನು ಪ್ರತಿ 2 ಬೆಳೆಗಳಿಗೊಮ್ಮೆ ಕೊಡುವುದು. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನೀರು ನಿರ್ವಹಣೆ, ಕಳೆ ನಿರ್ವಹಣೆ ಮತ್ತು ಭತ್ತದ ಬೀಜ ಸಂಗ್ರಹಣೆಯಲ್ಲಿ ಮಾತಿ ಹುಳುವಿನ ಹತೋಟಿ ಬಗ್ಗೆ ಅವರು ವಿವರಿಸಿದರು.ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ಮಾದರಿ ಪೌಷ್ಟಿಕ- ಕೈತೋಟದಲ್ಲಿ ಹಾಗೂ ಹಣ್ಣುಗಳನ್ನು ಬೇರೆ ಬೇರೆ ಜಾಗ ಅಥವಾ ಒಟ್ಟುಗೂಡಿಸಿ ಬೆಳೆಯಬಹುದು. ಇವುಗಳ ಬೇಸಾಯವನ್ನು ಲಾಭದಾಯಕವಾಗಿರಿಸಲು ಬಹಳ ಸಮಗ್ರ ರೀತಿಯಲ್ಲಿ ರೂಪಿಸುವುದು ಮುಖ್ಯ ಅಂಶ. ಇದರ ವಿಸ್ತೀರ್ಣವು ಅಲ್ಲಿ ಸಿಗುವ ಸ್ಥಳ, ತರಕಾರಿ ಹಾಗೂ ಹಣ್ಣುಗಳ ದಿನದ ಬೇಡಿಕೆ, ಉಸ್ತುವಾರಿಯ ಸಮಯ ಇವುಗಳ ಮೇಲೆ ಅವಲಂಬಿಸಿದೆ ಎಂದರು.
ಮನೆಯ ಬಲಕೆಯಲ್ಲಿ ವ್ಯರ್ಥವಾಗುವ ನೀರನ್ನು ಕಾಲುವೆ ಮೂಲಕ ಹರಿಸಿ ಸದುಪಯೋಗ ಪಡಿಸಿಕೊಳ್ಳಬಹುದು. ಒಂದೆರಡು ಕಾಂಪೋಸ್ಟ್ ಗುಂಡಿಗಳನ್ನು ತೋಟದಲ್ಲಿ ನೆರಳಿರುವ ಕಡೆ ತೋಡಿಸಿ ತೋಟದ ಹಾಗೂ ಮನೆಯ ವ್ಯರ್ಥ ವಸ್ತುಗಳನ್ನೆಲ್ಲಾ ಸಂಗ್ರಹಿಸಿ, ಸಸಿಮಡಿಗೆ ಹಾಗೂ ತೋಟಕ್ಕೆ ಬೇಕಾಗುವ ಕಾಂಪೋಸ್ಟ್ ತಯಾರಾಗಲು ವ್ಯವಸ್ಥೆ ಮಾಡಬೇಕು ಎಂದು ಅವರು ವಿವರಿಸಿದರು.