ದಲಿತರು ಮುಖ್ಯವಾಹಿನಿಗೆ ಬರಲು ಪ್ರೊ.ಕೃಷ್ಣಪ್ಪ ಅವರೇ ಕಾರಣ: ಎಲ್.ಎಸ್. ಶ್ರೀಕಾಂತ್

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ನರಸಿಂಹರಾಜಪುರ, ದಲಿತರು ಮುಖ್ಯ ವಾಹಿನಿಗೆ ಬರಲು ಪ್ರೊ.ಕೃಷ್ಣಪ್ಪ ಅವರೇ ಕಾರಣರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಲ್.ಎಸ್. ಶ್ರೀಕಾಂತ್ ತಿಳಿಸಿದರು.

ಸೂಸಲವಾನಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ( ಕೃಷ್ಣಪ್ಪ ಬಣ) ಗ್ರಾಮ ಶಾಖೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಲಿತರು ಮುಖ್ಯ ವಾಹಿನಿಗೆ ಬರಲು ಪ್ರೊ.ಕೃಷ್ಣಪ್ಪ ಅವರೇ ಕಾರಣರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಲ್.ಎಸ್. ಶ್ರೀಕಾಂತ್ ತಿಳಿಸಿದರು.

ಗುರುವಾರ ಸೂಸಲವಾನಿ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ( ಕೃಷ್ಣಪ್ಪ ಬಣ) ಆಶ್ರಯದಲ್ಲಿ ನಡೆದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸುವ ದೃಷ್ಟಿಯಿಂದ ಪ್ರತಿ ಹೋಬಳಿ ಕೇಂದ್ರದಲ್ಲೂ ವಸತಿ ಶಾಲೆ ತೆರೆಯಲು ಪ್ರೊ. ಕೃಷ್ಣಪ್ಪ ಅವರ ಪಾತ್ರ ಅಧಿಕವಾಗಿದೆ. ರಾಜ್ಯದ್ಯಂತ ಪ್ರೊ.ಕೃಷ್ಣಪ್ಪ ಬಣದ ಡಿಎಸ್ಎಸ್ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದರೂ ಒಗ್ಗಟ್ಟಿನ ಕೊರತೆಯಿಂದ ನಮ್ಮ ಶಕ್ತಿ ಕಡಿಮೆಯಾಗಿದೆ ಎಂದರು.

ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ನಮ್ಮ ಸಂಘಟನೆ ಸದಾ ಸಿದ್ಧವಿದೆ. ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಕೃಷ್ಣಪ್ಪ ಬಣದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಗಟ್ಟಿ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ ಉಪನ್ಯಾಸ ನೀಡಿ, ಡಾ.ಅಂಬೇಡ್ಕರ್ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರು. ಅವರು ಹಲವಾರು ಭಾಷೆ ಕಲಿತಿದ್ದು ನೂರಾರು ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಮುಂದಿನ ದಿನಗಳಲ್ಲಿ ದಲಿತರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಂವಿಧಾನದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮುಂದೆ ಅವರೇ ಸಮಾಜದ ಆಸ್ತಿಯಾಗುತ್ತಾರೆ ಎಂದರು.

ಪೊಲೀಸ್ ವೃತ್ತ ನಿರೀಕ್ಷಕ ಗುರುದತ್ ಕಾಮತ್ ಉದ್ಘಾಟಿಸಿ ಮಾತನಾಡಿ, ಡಿಎಸ್ಎಸ್ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಿಮ್ಮ ಕಾನೂನು ಬದ್ಧ ಹೋರಾಟಕ್ಕೆ ಸಹಕಾರ ನೀಡುತ್ತೇವೆ. ದೀನ,ದಲಿತರ ಸಮಸ್ಯೆ ಬಗ್ಗೆ ಸಂಘಟನೆ ಸ್ಪಂದಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ಮಾತನಾಡಿ, ಸೂಸಲವಾನಿ ಗ್ರಾಮದಲ್ಲಿ ಈ ಹಿಂದೆ ಹಲವಾರು ವರ್ಷಗಳಿಂದಲೂ ಆದಿ ಕರ್ನಾಟಕ ಹರಿಜನ ಜನಾಂಗಕ್ಕೆ ಸೇರಿದ 40 ಕುಟುಂಬಗಳಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದರು. ಈಗ ನಿಲ್ಲಿಸಲಾಗಿದೆ. ಇದರಿಂದ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ಅವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು. ಕೇರಳದಿಂದ ವಲಸೆ ಬಂದು ಇಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಸರ್ಕಾರದ ಈ ಬಗ್ಗೆ ಗಮನ ನೀಡಬೇಕು. 40 ಕುಟುಂಬದವರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಡಿಎಸ್ಎಸ್ ಸಂಘಟನೆ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ ಎಂದರು.

ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಮಿತಿ ಸದಸ್ಯೆ ಪವಿತ್ರ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಸುನೀಲ್, ಸದಸ್ಯೆ ಲಿಲ್ಲಿ ಮಾತುಕುಟ್ಟಿ, ಮುಖಂಡರಾದ ಎಸ್.ಡಿ.ರಾಜೇಂದ್ರ, ಎನ್.ಎಂ.ಕಾಂತರಾಜ್, ಮಂಜುನಾಥ್ ಕೆಸವಿ, ಡಿಎಸ್ಎಸ್ ಮುಖಂಡರಾದ ಮಹೇಂದ್ರ ಸ್ವಾಮಿ, ವಾಲ್ಮೀಕಿ ಶ್ರೀನಿವಾಸ್, ವಿಮಲ, ಶೆಟ್ಟಿಕೊಪ್ಪ ಮಹೇಶ್, ಪಿಕಪ್ ಚಂದ್ರು, ಮಹೇಂದ್ರಸ್ವಾಮಿ, ವಿಜಯಕುಮಾರಿ, ಕಡೂರು ಲಕ್ಷ್ಮಣ ಮುಂತಾದವರಿದ್ದರು.

Share this article