ಮೂಡುಬಿದಿರೆ: ಔಷಧಗಳ ಬಳಕೆಯನ್ನು ನಿಯಂತ್ರಿಸಲು ಕೇವಲ ವೈದ್ಯರು ಅಥವಾ ಫಾರ್ಮಸಿ ಸ್ಟ್ ಗಳ ಪ್ರಯತ್ನ ಸಾಕಾಗುವುದಿಲ್ಲ, ಸಮಾಜದ ಮನೋಭಾವದಲ್ಲಿಯೂ ಬದಲಾವಣೆ ಅಗತ್ಯವಿದೆ. ವೈದ್ಯರು ಮತ್ತು ಫಾರ್ಮಸಿಸ್ಟ್‌ಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಫಾರ್ಮಸಿಸ್ಟ್‌ಗಳಿಗೆ ನಿಯಮಿತ ತರಬೇತಿ ಹಾಗೂ ವೃತ್ತಿಪರ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಬೇಕು ಎಂದು ಚಿಂತಕ ಅರವಿಂದ ಚೊಕ್ಕಾಡಿ ಹೇಳಿದ್ದಾರೆ.ಶುಕ್ರವಾರ ಮೂಡುಬಿದಿರೆ ಆಳ್ವಾಸ್ ಕಾಲೇಜ್ ಕುವೆಂಪು ಸಭಾಂಗಣದಲ್ಲಿ, ವೃತ್ತಿ ನಿರತ ಔಷಧಿ ತಜ್ಞರ ಸಂಘ ಮಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಆಶ್ರಯದಲ್ಲಿ, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ, ಹಿರಿಯ ಔಷಧ ತಜ್ಞರಿಗೆ ಗೌರವಾರ್ಪಣೆ ಹಾಗೂ ‘ಆರೋಗ್ಯಕರ ಭವಿಷ್ಯಕ್ಕಾಗಿ ಔಷಧ ತಜ್ಞರ ಸಬಲೀಕರಣ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವೃತ್ತಿ ನಿರತ ಔಷಧಿ ತಜ್ಞರ ಸಂಘದ ಅಧ್ಯಕ್ಷ ಚಿತ್ತರಂಜನ್ ಬಿ. ಎಸ್. ಪ್ರಸ್ತಾವಿಕ ಮಾತುಗಳನ್ನಾಡಿ, ವೃತ್ತಿಪರ ಹೊಣೆಗಾರಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಮಕ್ಕಳ ತಜ್ಞ ಡಾ. ಮುರುಳಿ ಕೃಷ್ಣ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಧ್ಯಪಕಿ ಡಾ ಸೌಮ್ಯ ಸರಸ್ವತಿ ಮಾತನಾಡಿದರು.
ಹಿರಿಯ ಔಷಧ ತಜ್ಞ ಮೊಹಮ್ಮದ್ ಜಾವಿದ್ ಹಸನ್ ಸಂಘದ ವತಿಯಿಂದ ಗೌರವಿಸಲಾಯಿತು. ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಚಾರ‍್ಯ ಡಾ ಮಂಜುನಾಥ ಸೆಟ್ಟಿ ಸಮಾರೋಪ ಕಾರ‍್ಯಕ್ರಮದಲ್ಲಿ ಮಾತನಾಡಿದರು.ವೃತ್ತಿ ನಿರತ ಔಷಧಿ ತಜ್ಞರ ಸಂಘದ ಅಧ್ಯಕ್ಷ ಚಿತ್ತರಂಜನ್ ಬಿ. ಎಸ್., ಖಜಾಂಚಿ ಸೂರಜ್ ಎಸ್. ಪೈ, ಜಂಟಿ ಕಾರ್ಯದರ್ಶಿ ರಾಮದಾಸ್ ಶೆಣೈ ಇದ್ದರು. ಸಂಘದ ಉಪಾಧ್ಯಕ್ಷ ಪ್ರೊ. ಮಾಧವ ರಾವ್ ಕರ‍್ಯಕ್ರಮ ನಿರ್ವಹಿಸಿದರು. ಸದಸ್ಯ ನವೀನ್ ಟಿ ಆರ್ ಪ್ರಾರ್ಥನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಶ್ರೀಧರ್ ವಂದಿಸಿದರು.