ಸ್ವಯಂ ಅನುಭವದಿಂದ ಕೃಷಿಯಲ್ಲಿ ಲಾಭ

KannadaprabhaNewsNetwork |  
Published : Jun 21, 2026, 02:15 AM IST
20ಕೆಪಿಎಲ್3:ಕೊಪ್ಪಳ ಜಿಲ್ಲೆಯ ಆಚಾರತಿಮ್ಮಾಪುರದ 'ಶ್ರೀ ಫಾರ್ಮ್'ನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಸಾವಯವ ಕೃಷಿಕರ ಬಳಗದ ಸಹಯೋಗದಲ್ಲಿ  ಜರುಗಿದ 'ಸಾವಯವ ಸಂವಾದ'ದಲ್ಲಿ ಗೌರಿಶಂಕರ ಕರೋಶಿ ಮಾತನಾಡಿದರು.  | Kannada Prabha

ಸಾರಾಂಶ

ಬೇಸಾಯ ಪ್ರಭಾವಿಸುವ ಹಲವು ಆಯಾಮಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳಬೇಕು

ಕೊಪ್ಪಳ: ಹವಾಮಾನ ವೈಪರೀತ್ಯ, ಮಾರುಕಟ್ಟೆ ಏರಿಳಿತದ ಮಧ್ಯೆ ಕೃಷಿಕರು ಬೇಸಾಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಲಾಭದಾಯಕ ಮಾಡುವ ಹಲವು ಮಾರ್ಗೋಪಾಯ ಹುಡುಕುವ ಅಗತ್ಯವಿದೆ ಎಂದು ಧಾರವಾಡ ಸಾವಯವ ಕೃಷಿಕ ಗೌರಿಶಂಕರ ಕರೋಶಿ ಹೇಳಿದರು.

ಜಿಲ್ಲೆಯ ಆಚಾರತಿಮ್ಮಾಪುರದ ಶ್ರೀ ಫಾರ್ಮ್ ನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಸಾವಯವ ಕೃಷಿಕರ ಬಳಗದ ಸಹಯೋಗದಲ್ಲಿ ಸಾವಯವ ಸಂವಾದದಲ್ಲಿ ಮಾತನಾಡಿದ ಅವರು, ಹಲವು ಸವಾಲು ಎದುರಿಸುತ್ತ ರೈತರು ಬೇಸಾಯ ಮಾಡುತ್ತಿದ್ದಾರೆ. ನಷ್ಟದ ಬಾಬ್ತು ಎನಿಸಿರುವ ಒಕ್ಕಲುತನದಿಂದ ಲಾಭ ಗಳಿಸುವ ಮಾರ್ಗ ಸ್ವಯಂ ಅನುಭವದಿಂದಲೇ ಕೃಷಿಕರು ಕಂಡುಕೊಳ್ಳಬೇಕು ಎಂದರು.

ಬೇಸಾಯ ಪ್ರಭಾವಿಸುವ ಹಲವು ಆಯಾಮಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳಬೇಕು. ಮಣ್ಣು, ನೀರು, ಬಿತ್ತನೆ ಬೀಜಗಳ ಜತೆಗೆ ಹೈನುಗಾರಿಕೆ ಅಂಶಗಳ ಬಗ್ಗೆ ಪ್ರಸ್ತಾಪಿಸಿದರು. ಬೇಸಾಯದಿಂದ ನಷ್ಟವೇ ಜಾಸ್ತಿ ಎಂಬ ಮಾತು ಚಾಲ್ತಿಯಲ್ಲಿದ್ದು, ಹಲವಾರು ಬಗೆಯ ವಿಶ್ಲೇಷಣೆ ಹಾಗೂ ಕೃಷಿ ಪರಿಸರ ಸೂಕ್ಷ್ಮವಾಗಿ ಗಮನಿಸುವ ಮೂಲಕ ರೈತರು ಆದಾಯ ಗಳಿಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಪ್ರಶ್ನೆಗಳ ಸರಣಿಯ ಮೂಲಕ ರೈತರಿಂದಲೇ ಉತ್ತರ ಪಡೆಯುವ ವಿಶಿಷ್ಟ ಬಗೆಯ ಸಂವಾದ ನಡೆಸಿದ ಗೌರಿಶಂಕರ, ಪ್ರಕೃತಿಗೆ ಹಾನಿ ಮಾಡದಂತೆ ಆರ್ಥಿಕ ಪ್ರಯೋಜನ ಪಡೆಯುವ ಸಫಲ ಬೇಸಾಯದ ಒಳಗುಟ್ಟು ತೆರೆದಿಟ್ಟರು.

ಪ್ರಾಸ್ತಾವಿಕ ಮಾತನಾಡಿದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಬದರಿಪ್ರಸಾದ್ ಪಿ.ಆರ್., ರೈತರ ಹೊಲ-ತೋಟಗಳಲ್ಲಿ ಅನುಭವಿ ರೈತರ ಜತೆಗಿನ ಚರ್ಚೆಗಳ ಮೂಲಕ ಕೃಷಿ ಸಮುದಾಯಕ್ಕೆ ಪ್ರಯೋಜನ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಕೊಪ್ಪಳ ಸಾವಯವ ಕೃಷಿಕರ ಬಳಗದ ಅಧ್ಯಕ್ಷ ಶ್ರೀಪಾದರಾಜ ಮುರಡಿ, ಪರಿಸರಸ್ನೇಹಿ ಕೃಷಿ ಪದ್ಧತಿ ರೈತರಿಗೆ ತಲುಪಿಸಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಬಳಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತಿದೆ ಎಂದರು.

ಹತ್ತಕ್ಕೂ ಹೆಚ್ಚು ಜಿಲ್ಲೆಗಳಿಂದ ಸುಮಾರು 350 ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹರೀಶ್ ತಾಳೂರೆ ಸ್ವಾಗತಿಸಿದರು. ದೇವರಾಜ ಮೇಟಿ ವಂದಿಸಿದರು. ಉದಯ್ ರಾಯರಡ್ಡಿ, ಅವಿನಾಶ್, ಗಂಗಾಧರ ನಾಗೇಶನಹಳ್ಳಿ, ಮಲ್ಲಪ್ಪ ಕುಂಬಾರ, ಪವನ್ ಗಡಚಿಂತಿ, ಕೊಟ್ರೇಶ್, ದೇವೇಂದ್ರ ಜಿರ್ಲಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಅವಶ್ಯ
ಅರ್ಧಕ್ಕೆ ನಿಂತ ಶಾಲಾ ಕಟ್ಟಡ ಪೂರ್ಣಗೊಳಿಸಿ