ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನುಡಿದಂತೆ ನಡೆಯುವ ಈ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಆ ಮೂಲಕ ಬಸವಣ್ಣನವರು ಕಂಡ ಸಮಸಮಾಜ ನಿರ್ಮಾಣದ ಕನಸು ಸಾಕಾರಗೊಳಿಸಲಾಗುತ್ತಿದೆ ಎಂದರು.
ಬಸವಣ್ಣನವರು ನಾಡು ಕಂಡ ನಿಜವಾದ ಧರ್ಮ ಮತ್ತು ಸಮಾಜ ಸುಧಾರಕ, 12ನೇ ಶತಮಾನದ ಶ್ರೇಷ್ಠ ಸಂತ. ಹೀಗಾಗಿ ಮಹಾತ್ಮ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ. ಇನ್ಮುಂದೆ ಸರ್ಕಾರದ ಪ್ರತಿ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ವಚನ ಪಠಿಸುವ ಮೂಲಕ ಕಾರ್ಯಕ್ರಮ ಆರಂಭಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ವಿಜಯಪುರ ಜಿಲ್ಲೆಯ ಹೆಮ್ಮೆ. ಅಲ್ಲದೇ, ಸಿದ್ದರಾಮಯ್ಯ ಸರ್ಕಾರ ಬಸವಣ್ಣನವರ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿರುವುದು ಕೂಡ ಹೆಮ್ಮೆಯ ವಿಚಾರವೇ. ಬಸವಣ್ಣನವರ ಆಶಯವೇ ಸಂವಿಧಾನದಲ್ಲಿ ಅಳವಡಿಸಲಾಗಿದೆ. ಹೀಗಾಗಿ ಸಂವಿಧಾನ ಮತ್ತು ಬಸವಣ್ಣನವರ ಆಶಯವೇ ಕಾಂಗ್ರೆಸ್‌ನ ಆಶಯ. ಹೀಗಾಗಿ ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನವರ ಹೆಸರಿಡಲಾಗಿದೆ ಎಂದು ತಿಳಿಸಿದರು.
ಶೆಟ್ಟರ್ ಬಿಜೆಪಿ ಸೇರಿದ್ದು ಪಕ್ಷಕ್ಕೆ ಹಾನಿ ಇಲ್ಲ:
ಬಿಜೆಪಿಯಿಂದ ಜಗದೀಶ ಶೆಟ್ಟರ ಅವಮಾನಿತರಾಗಿದ್ದರು. ಆಗ ನಾನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವರು ಜಗದೀಶ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರಲು ಶ್ರಮಿಸಿದ್ದೆವು. ವಿಧಾನಸಭೆ ಟಿಕೆಟ್ ಕೊಟ್ಟ ಬಳಿಕ ಸೋತರೂ ಅವರನ್ನು ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಇಷ್ಟೆಲ್ಲ ಗೌರವ ನೀಡಿದರೂ ಏಕಾಏಕಿ ಬಿಜೆಪಿ ಸೇರ್ಪಡೆಯಾಗಿರುವುದು ಏಕೆಂದು ಗೊತ್ತಿಲ್ಲ. ಜಗದೀಶ್ ಶೆಟ್ಟರ್ ನಡೆ ಬಗ್ಗೆ ನಾವು ಪ್ರತಿಕ್ರಿಯಿಸುವುದಕ್ಕಿಂತ ಜನರೇ ನಿರ್ಧಾರ ಮಾಡುತ್ತಾರೆ. ಜನ ಏನನ್ನುತ್ತಾರೆ ಎನ್ನುವುದು ಅವರೇ ತಿಳಿದುಕೊಳ್ಳಲಿ ಎಂದರು.
ಒಬ್ಬರು ಹೋಗಿದ್ದಾರೆ ಎಂದ ಮಾತ್ರಕ್ಕೆ ಮತ್ತೊಬ್ಬರ ಹೆಸರನ್ನು ತಳುಕು ಹಾಕುವುದು ತರವಲ್ಲ ಎಂದು ಹೇಳಿದರು.