ಶಿಕ್ಷಣದಿಂದ ಮಾತ್ರ ಪ್ರಗತಿ ಹೊಂದಲು ಸಾಧ್ಯ

KannadaprabhaNewsNetwork | Published : Jul 29, 2024 12:58 AM

ಸಾರಾಂಶ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ) ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ನೂತನ ಕಾಯ್ದೆಗಳ ಕುರಿತಾದ ಕಾನೂನು ಅರಿವು ಕಾರ್ಯಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿಕ್ಷಣ ಪಡೆಯುವ ಮೂಲಕ ನಮ್ಮ ಪ್ರಗತಿಯನ್ನು ನಾವೇ ಮಾಡಿಕೊಳ್ಳಬೇಕಿದೆ, ಸಂವಿಧಾನ ಶಿಲ್ಪಿ ಡಾ.ಬಿ. ಆರ್‌. ಅಂಬೇಡ್ಕರ್ ರವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮಾನ್ಯತೆ ನೀಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಎನ್‌ಎಸ್, ಬಿಎನ್ಎಸ್ಎಸ್, ಬಿಎನ್ಎಸ್ಎ ಹಾಗೂ ಪಿಒಎ ಕಾಯ್ದೆಗಳ ಕುರಿತಾದ ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯ ಪಡೆಯಲು ಎಷ್ಟು ಹೋರಾಟಮಾಡಲಾಯಿತೊ ಅಷ್ಟೇ ಪ್ರಮಾಣದಲ್ಲಿ ಹೋರಾಟ ಸ್ವಾತಂತ್ರ್ಯ ನಂತರವೂ ನಡೆದಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದವು ಈ ಸಮಯದಲ್ಲಿ ಅಂಬೇಡ್ಕರ್ ರವರ ಪ್ರಪಂಚವನ್ನು ಪರ್ಯಟನೆ ಮಾಡುವುದರ ಮೂಲಕ ದೇಶಕ್ಕೆ ಅರ್ಥ ಗರ್ಭೀತವಾದ, ವೈಶಿಷ್ಟ ಪೂರ್ಣವಾದ, ಉತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಮ ಸಮಾಜದ ಪರಿಕಲ್ಪನೆಯನ್ನು ಅಂಬೇಡ್ಕರ್ ರವರು ನೀಡಿದ್ದಾರೆ ಎಂದರು.

ದೇಶದಲ್ಲಿ ನಾವೆಲ್ಲರೂ ಕಾನೂನು ಅಡಿ ಬದುಕುತ್ತಿದ್ದು, ಅದನ್ನು ರಕ್ಷಣೆ ಮಾಡಬೇಕಿದೆ ಹಾಗೂ ಕಾನೂನನ್ನು ಅನುಸರಿಸಬೇಕಿದೆ. ಬಡತನ, ಅಸ್ಪೃಶ್ಯತೆ ಹಾಗೂ ಮೌಢ್ಯ ಇವು ಮೂರು ನಾಡಿಗೆ ಇರುವಂತ ಶಾಪಗಳಾಗಿವೆ. ಯಾರೂ ಸಹಾ ನಾವು ಇಂತಹ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿಯನ್ನು ಹಾಕುವುದಿಲ್ಲ ಆದರೆ ಹುಟ್ಟಿದ ನಂತರ ಇರುವ ಬದುಕು ನಮ್ಮ ಕೈಯಲ್ಲಿದೆ. ಅದನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ನಮ್ಮಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರ ಮೂಲ ಬೇರು ಗ್ರಾಮೀಣ, ದಲಿತ ಹಿಂದುಳಿದ ವರ್ಗದವರಾಗಿರುತ್ತಾರೆ. ಎಲ್ಲಿ ಕಷ್ಠ ಇರುತ್ತದೆ ಅಲ್ಲಿ ಸಾಧನೆ ಮಾಡುವ ಛಲ ಇರುತ್ತದೆ ಎಂದರು.

ಹೈಕೋರ್ಟ್ ನ್ಯಾಯಾವಾದಿಗಳಾದ ಬಾಲನ್ ಅವರು ಮಾತನಾಡಿ, ಸರ್ಕಾರ ಪ್ರಸ್ತುತ ಜಾರಿಗೆ ತಂದಿರುವ ಕಾನೂನುಗಳು ಹಳೆಯದಾದ ಬಾಟಲ್ ಹೊಸದಾದ ವಿಷದ ಬಾಟಲ್ ಆಗಿದೆ, ಈಗ ಇರುವ ಕಾನೂನು ಯಾವ ಭಾಷೆಯಲ್ಲಿ ಇದೆ ಎಂಬುದು ಅರ್ಥವಾಗುತ್ತಿಲ್ಲ, ಈಗ ಆಡಳಿತದಲ್ಲಿ ಇರುವ ಶೇ.100ರಲ್ಲಿ ಶೇ.70 ರಷ್ಟು ಬ್ರಾಹ್ಮಣರಾಗಿದ್ದಾರೆ ಎಲ್ಲಾ ಮುಂಚೂಣಿಯ ಸ್ಥಾನದಲ್ಲಿಯೂ ಸಹಾ ಅವರು ಇದ್ದಾರೆ. ಶೇ.3ರಷ್ಟು ಇರುವ ಅವರು ಶೇ.70 ರಷ್ಟ ಇರುವವರನ್ನು ಆಳುತ್ತಿದ್ದಾರೆ ಎಂದರು.

ಸರ್ಕಾರ ಈಗ ಜಾರಿ ಮಾಡಿರುವ ಕಾನೂನುಗಳು ದಲಿತ, ಮಾನವ ವಿರೋಧಿಯಾಗಿದೆ. ಕಾನೂನು ರಚನೆ ಮಾಡುವವರಲ್ಲಿ ದಲಿತರು ಇದ್ದರೆ ಅಗ ದಲಿತರ ಪರವಾದ ಕಾನೂನು ರಚನೆಯಾಗುತ್ತದೆ ಆದರೆ ಅಲ್ಲಿ ನಮ್ಮವರು ಯಾರು ಇಲ್ಲದಿರುವುದರಿಂದ ನಮಗೆ ಪೂರಕವಾದ ಕಾನೂನುಗಳು ಬರುತ್ತಿಲ್ಲ ಎಂದು ವಿಷಾಧಿಸಿದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೀಸಲಾತಿ)ಯ ರಾಜ್ಯಾಧ್ಯಕ್ಷ ವೈ.ರಾಜಣ್ಣ ತುರುವನೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಗಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ರವಿ, ವಕೀಲರಾದ ಎಂ.ಕೆ.ಲೋಕೇಶ್, ಎನ್.ಚಂದ್ರಪ್ಪ, ಮಾಲತೇಶ್ ಆರಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ಯ ಗೌರವಾಧ್ಯಕ್ಷರಾದ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಜಗದೀಶ್ ಪಿ.ಕವಾಡಿಗರ ಹಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ಅಂಜಿನಪ್ಪ, ರಾಜ್ಯ ಉಪಾಧ್ಯಕ್ಷ ಹೆಚ್.ಕೃಷ್ಣಮೂರ್ತಿ, ಜೈ ಭೀಮ್ ಯುವಕ ಸಂಘದ ರಾಜ್ಯಾಧ್ಯಕ್ಷ ಮಹೇಶ್. ಎಂ ಭಾಗವಹಿಸಿದ್ದರು.

ಶಿಕ್ಷಣ ಸಂಘಟನೆ ಹೋರಾಟವನ್ನು ನಾವುಗಳು ನಾವು ಮೈಗೊಡಿಸಿಕೊಂಡಾಗ ಮೇಲ್ಪಂಕ್ತಿಗೆ ಹೊಗಲು ಸಾಧ್ಯವಾಗುತ್ತದೆ. ಶಿಕ್ಷಣ ಪಡೆಯುವುದರ ಮೂಲಕ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಿದೆ.

-ಕುಮಾರಸ್ವಾಮಿ ಅಪರ ಜಿಲ್ಲಾಧಿಕಾರಿ

Share this article