ಸಂಪರ್ಕ ರಸ್ತೆ ಅಭಿವೃದ್ಧಿಯಿಂದ ಗ್ರಾಮಗಳ ಪ್ರಗತಿ: ಶಾಸಕ ಪುಟ್ಟರಂಗಶೆಟ್ಟಿ

KannadaprabhaNewsNetwork | Published : Nov 1, 2024 12:13 AM

ಸಾರಾಂಶ

ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ದಿ ಪಡಿಸಿದರೆ, ಆ ಗ್ರಾಮಗಳ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು. ಚಾಮರಾಜನಗರದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ನಂಜೇದೇವನಪುರದಿಂದ ಕಗ್ಗಳಿಪುರ ರಸ್ತೆ ಅಭಿವೃದ್ಧಿಗೆ ಚಾಲನೆ । ₹20 ಲಕ್ಷ ವೆಚ್ಚದ ಕಾಮಗಾರಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ದಿ ಪಡಿಸಿದರೆ, ಆ ಗ್ರಾಮಗಳ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದರು.

ತಾಲೂಕಿನ ನಂಜೇದೇವನಪುರದಿಂದ ಕಗ್ಗಳಿಪುರ ಮಾರ್ಗವಾಗಿ ತಮ್ಮಡಹಳ್ಳಿಗೆ ಸಂಪರ್ಕ ಕಲ್ಪಿಸುವ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರಾಧಿಕಾರದಿಂದ ೨೦ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿರೊಂದಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಈ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಗುಣಮಟ್ಟದ ರಸ್ತೆ ದೊರೆಯುತ್ತದೆ. ಅಲ್ಲದೇ ರೈತರು ಬೆಳೆದ ಫಸಲನ್ನು ಮತ್ತೊಂದು ಕಡೆಗೆ ಸಾಗಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ನಮ್ಮ ಕ್ಷೇತ್ರದ ವ್ಯಾಪ್ತಿಯ ಅನೇಕ ರಸ್ತೆಗಳನ್ನು ಗುರುತಿಸಿ ಅನುದಾನ ನೀಡುವ ಮೂಲಕ ಅಭಿವೃದ್ದಿಗೆ ಮುಂದಾಗಿದ್ದಾರೆ. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವ ಮೂಲಕ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ೭ ಕೋಟಿ ರು. ಬಿಡುಗಡೆ ಮಾಡಿದ್ದು, ನಾನು ಅಧ್ಯಕ್ಷನಾದ ಬಳಿಕ ಈ ಎಲ್ಲಾ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಇನ್ನು ೧೫ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಕಾಡಾ ವ್ಯಾಪ್ತಿಗೆ ಚಾಮರಾಜನಗರ ಜಿಲ್ಲೆ ಸೇರಿದಂತೆ ಏಳು ಜಿಲ್ಲೆಗಳು ಸೇರ್ಪಡೆಯಾಗಿವೆ. ಹೀಗಾಗಿ ಹಿಂದುಳಿದ ಹಾಗೂ ಗಡಿ ಜಿಲ್ಲೆಯ ಚಾಮರಾಜನಗರದ ರೈತರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಜಲಾನಯನ ವ್ಯಾಪ್ತಿಗೆ ಬರುವ ಕೆರೆಗಳು. ರೈತರು ಜಮೀನುಗಳಿಗೆ ತೆರಳುವ ರಸ್ತೆಗಳು. ಸೇತುವೆ ನಿರ್ಮಾಣ, ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳು ತ್ವರಿತ ಗತಿಯಲ್ಲಿ ಕಾಡಾದಿಂದ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಮ್ಮಡಹಳ್ಳಿ ಮಾರ್ಗದಲ್ಲಿ ಶ್ರೀ ವರಹನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕೈಗೊಂಡಿದ್ದು, ದೇವಸ್ಥಾನದ ಮುಂಭಾಗದಲ್ಲಿ ಗರುಡಧ್ವಜ ಸ್ಥಾಪನೆಗೆ ಹಣ ನೀಡುವಂತೆ ದೇವಸ್ಥಾನದ ಸಮಿತಿ ಅವರು ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಶಾಸಕರು ಸಹ ಸಮ್ಮತಿ ಸೂಚಿಸಿದರು.

ನಂಜೇದೇವನಪುರ ಮಠಾಧ್ಯಕ್ಷರಾದ ರಾಜೇಂದ್ರ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಶೇಖರಪ್ಪ, ಉಪಾಧ್ಯಕ್ಷ ಪಟೇಲ್ ಗುರುಮಲ್ಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಎಂ.ಶಿವಸ್ವಾಮಿ, ಮುಖಂಡರಾದ ಪಿ.ರಾಜಣ್ಣ, ಪಿ.ಗುರುಮಲ್ಲಪ್ಪ, ಗೌಡಿಕೆ ನಾಗೇಶ್, ಗ್ರಾಪಂ ಮಾಜಿ ಸದಸ್ಯ ಮಹೇಶ್, ಡೇರಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಸದಸ್ಯರಾದ ಶಾಂತಪ್ಪ, ಬಸವೇಗೌಡ, ಎಸ್.ರಾಜೇಶ್, ಕೊಂಗಳಪ್ಪ, ಎನ್.ಎಂ.ನಾಗರಾಜು, ಸುನೀಲ್, ವಿರೂಪಾಕ್ಷ, ಉಡಿಗಾಲ ಶೇಖರಪ್ಪ, ಭರತ್, ಪ್ರಸಾದ್, ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಗಣೇಶ್ ಪ್ರಸಾದ್, ಗುತ್ತಿಗೆದಾರ ಹೇಮಂತ್ ಹಾಗೂ ಗ್ರಾಮಸ್ಥರು ಇದ್ದರು.

Share this article