ಗ್ಯಾರಂಟಿ ಅನುಷ್ಠಾನ ಸಮಿತಿಯಿಂದ ಪ್ರಗತಿ ಪರಿಶೀಲನಾ ಸಭೆ

KannadaprabhaNewsNetwork | Published : Nov 27, 2024 1:06 AM

ಸಾರಾಂಶ

ಸೆಸ್ಕಾಂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ರಾಘವೇಂದ್ರ ಗೃಹ ಜ್ಯೋತಿಯಡಿ ತಾಲೂಕಿನಲ್ಲಿ ಒಟ್ಟು 23,296 ನೋಂದಾವಣೆಗೊಂಡಿದ್ದಾರೆ. 23,217 ಗ್ರಾಹಕರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. 21 ಗ್ರಾಹಕರು ತಾಂತ್ರಿಕ ಕಾರಣದಿಂದ ಯೋಜನೆಯ ಹೊರಗುಳಿದಿದ್ದಾರೆ. ತಾಂತ್ರಿಕ ಕಾರಣದಿಂದ ಹೊರಗಿರುವ ಗ್ರಾಹಕರಿಗೆ ಶೀಘ್ರ ಸಮಸ್ಯೆ ಬಗೆಹರಿಸಿ ಯೋಜನೆಯ ಲಾಭ ಮಾಡಿಕೊಡಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಪೃಥ್ವಿ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಪಂಚ ಗ್ಯಾರಂಟಿಗಳ ಯೋಜನೆಗಳ ಸುಗಮ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿನ ಪಡಿತರ ಧಾನ್ಯಗಳ ವಿತರಣೆ ತೂಕದ ವ್ಯತ್ಯಾಸ, ಆಹಾರ ಧಾನ್ಯಗಳ ಗುಣಮಟ್ಟ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು.

ಕೆಎಸ್ಆರ್ ಟಿ ಸಿ ಬಸ್ಸುಗಳು ಪಟ್ಟಣದ ಒಳಗೆ ಸಂಚರಿಸದೇ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಆ ಬಸ್ಸುಗಳ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಮಹಿಳೆಯರು ವಿವಿಧ ಸರ್ಕಲ್ ಗಳಲ್ಲಿ ಕೈ ತೋರಿಸಿದಾಗ ಬಸ್ಸುಗಳನ್ನು ಕಡ್ಡಾಯವಾಗಿ ನಿಲ್ಲಿಸಿ ಅವರು ಬಸ್ಸಿನ ಒಳಗೆ ಹತ್ತಿದ ನಂತರ ಬಾಗಿಲು ಕಡ್ಡಾಯವಾಗಿ ಹಾಕಬೇಕು. ಹಲವಾರು ಪ್ರಯಾಣಿಕರು ಬಸ್ಸಿನ ಬಾಗಿಲು ಬಳಿ ನಿಂತು ಕೆಳಗೆ ಬಿದ್ದಿರುವ ಉದಾಹರಣೆಗಳಿವೆ. ಶೀಘ್ರ ಅಧಿಕಾರಿಗಳು ಚಾಲಕ ಮತ್ತು ನಿರ್ವಾಹಕರಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ನೀಡಿ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ನಾಗರಿಕರಿಗೂ ಸಿಗುವಂತಾಗಬೇಕು. ಈ ಯೋಜನೆಗಳು ಯಾರಿಗೆ ತಲುಪಿಲ್ಲವೋ ಅಂತವರಿಗೆ ಈಗಾಗಲೇ ಅರಿವು ಕಾರ್ಯಕ್ರಮ ಮಾಡಲಾಗಿದೆ. ಇನ್ನು ವೇಗವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ. ಟಿ. ಮಲ್ಲೇಶ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ 22,730 ಅರ್ಹ ಫಲಾನುಭವಿಗಳಿದ್ದು 21,273 ನೋಂದಣಿಯಾದ ಫಲಾನುಭವಿಗಳು ಇದ್ದಾರೆ. 415 ಫಲಾನುಭವಿಗಳ ರೇಷನ್ ಕಾರ್ಡ್ ತಿದ್ದುಪಡಿ ಆಗಬೇಕಿದೆ, 65 ಐಟಿ ಪಾವತಿದಾರರಿದ್ದಾರೆ. 332 ಮರಣ ಹೊಂದಿರುವ ಫಲಾನುಭವಿಗಳಿದ್ದಾರೆ. 314 ಫಲಾನುಭವಿಗಳು ಆಧಾರ್ ತಾಂತ್ರಿಕ ಸಮಸ್ಯೆಯಿಂದ ಯೋಜನೆಯಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಎಲ್ಲಾ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸೆಸ್ಕಾಂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ರಾಘವೇಂದ್ರ ಗೃಹ ಜ್ಯೋತಿಯಡಿ ತಾಲೂಕಿನಲ್ಲಿ ಒಟ್ಟು 23,296 ನೋಂದಾವಣೆಗೊಂಡಿದ್ದಾರೆ. 23,217 ಗ್ರಾಹಕರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. 21 ಗ್ರಾಹಕರು ತಾಂತ್ರಿಕ ಕಾರಣದಿಂದ ಯೋಜನೆಯ ಹೊರಗುಳಿದಿದ್ದಾರೆ. ತಾಂತ್ರಿಕ ಕಾರಣದಿಂದ ಹೊರಗಿರುವ ಗ್ರಾಹಕರಿಗೆ ಶೀಘ್ರ ಸಮಸ್ಯೆ ಬಗೆಹರಿಸಿ ಯೋಜನೆಯ ಲಾಭ ಮಾಡಿಕೊಡಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.

ಆಹಾರ ನಿರೀಕ್ಷಕ ಮೋಹನ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 23,169 ಪಡಿತರ ಚೀಟಿದಾರರಿದ್ದು ಡಿಪಿಟಿ ಮುಖಾಂತರ ಅರ್ಹ ಫಲಾನುಭವಿಗಳ ಸಂಖ್ಯೆ 22, 606 ಪಡಿತರ ಚೀಟಿಗಳು ಇವೆ. ಯೋಜನೆಯ ಲಾಭವನ್ನು 22,398 ಒಟ್ಟು ಅರ್ಹ ಫಲಾನುಭವಿಗಳು ಪಡೆಯುತ್ತಿದ್ದಾರೆ. 208 ಪಡಿತರ ಚೀಟಿದಾರರಿಗೆ ತಾಂತ್ರಿಕ ಕಾರಣದಿಂದ ಯೋಜನೆಯ ಹಣ ಪಾವತಿಯಾಗಿರುವುದಿಲ್ಲ. ಯೋಚನೆ ಸವಲತ್ತು ವಿತರಿಸುವ ಕ್ರಮ ವಹಿಸಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಶಿವೇಗೌಡ, ಯೋಗೇಶ್ ಬಿ.ಇ, ಶ್ರೀಧರ್, ರುದ್ರ ಕುಮಾರ್, ರಂಗನಾಥ್, ದರ್ಶನ್, ಭುವನೇಶ್, ಯಾಕುಬ್, ಮಧು ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿ ಅಶೋಕ್ ಉಪಸ್ಥಿತರಿದ್ದರು.

Share this article