ಪ್ರಗತಿಪರ ರೈತನಿಗೆ ಡಾಕ್ಟರೇಟ್‌ ಗೌರವ

KannadaprabhaNewsNetwork |  
Published : May 27, 2025, 12:08 AM ISTUpdated : May 27, 2025, 12:10 AM IST
ಪೋಟೊ26ಕೆಎಸಟಿ1: ಕುಷ್ಟಗಿಯ ಪ್ರಗತಿಪರ ರೈತ ದೇವೆಂದ್ರಪ್ಪ ಬಳೂಟಗಿ ಅವರಿಗೆ ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿ ಗೌರವಿಸಿರುವದು. | Kannada Prabha

ಸಾರಾಂಶ

ಕುಷ್ಟಗಿ ನಿವಾಸಿ, ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರ ಕೃಷಿ ಸಾಧನೆ ಗುರುತಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಇತರರಿಗೂ ಮಾದರಿಯಾಗಿದೆ. ಮೊದಲು ದಾಳಿಂಬೆ ಬೆಳೆ ಬೆಳೆದು ಉತ್ತಮ ಲಾಭ ಗಳಿಸುವ ಮೂಲಕ ಇತರ ರೈತರು ಈ ಬೆಳೆ ಬೆಳೆಯಲು ಪ್ರೇರಣೆಯಾಗುತ್ತಾರೆ.

ಕುಷ್ಟಗಿ:

ಪಟ್ಟಣದ ನಿವಾಸಿ, ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ತನ್ನ ಗೌರವ ಡಾಕ್ಟರೇಟ್ ಪದವಿ ನೀಡಿದೆ.

ತಾಲೂಕಿನ ಕೆ. ಗೋನಾಳ ಗ್ರಾಮದವರಾದ ದೇವೇಂದ್ರಪ್ಪ, ಕೃಷಿ ಕುಟುಂಬದಲ್ಲಿ ಜನಿಸಿದ್ದು 10ನೇ ತರಗತಿ ವರೆಗೆ ವ್ಯಾಸಾಂಗ ಮಾಡಿದರು. ಬಳಿಕ ಗುತ್ತಿಗೆದಾರರ ಹತ್ತಿರ ಕೆಲಸಕ್ಕೆ ಸೇರಿದರು. ತದನಂತರ ತಾವು ಸಹಿತ ಕ್ಲಾಸ್‌-1 ಗುತ್ತಿಗೆದಾರರಾಗಿ ಸ್ವಲ್ಪ ದಿನ ಕೆಲಸ ಮಾಡಿದರು. 1985ರ ನಂತರದ ಅವಧಿಯಲ್ಲಿ ಗುತ್ತೇದಾರಿಕೆ ಬದಿಗೊತ್ತಿ ಕೃಷಿ ಕಾರ್ಯದಲ್ಲಿ ತೊಡಗಿದರು. ಅಂದಿನಿಂದ ಈ ವರೆಗೂ ಇಳಿವಯಸ್ಸಿನಲ್ಲೂ (71) ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಹೊಸ ಹೊಸ ಆವಿಷ್ಕಾರ, ಸಂಶೋಧನೆ ಮೂಲಕ ಕೃಷಿಯಲ್ಲಿ ಅತ್ಯುತ್ತಮ ಆದಾಯ ಗಳಿಸಿ ಉತ್ತಮವಾದ ಜೀವನ ಕಟ್ಟಿಕೊಂಡಿದ್ದಾರೆ.

ಮೊದಲು ದಾಳಿಂಬೆ ಬೆಳೆ ಬೆಳೆದು ಉತ್ತಮ ಲಾಭ ಗಳಿಸುವ ಮೂಲಕ ಇತರ ರೈತರು ಈ ಬೆಳೆ ಬೆಳೆಯಲು ಪ್ರೇರಣೆಯಾಗುತ್ತಾರೆ. ಬಳೂಟಗಿ ಅವರು ಕೇವಲ ಕೃಷಿಯಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಯಲ್ಲೂ ಅನೇಕ ಪ್ರಯೋಗ ಮಡಿದ್ದಾರೆ. ಅರಣ್ಯ ಕೃಷಿ, ಭೂ ಸವಕಳಿ ತಡೆಗಟ್ಟುವ ನಿಟ್ಟಿನಲ್ಲಿ ಮರಗಿಡಗಳ ಪಾತ್ರ, ಜಲಸಂರಕ್ಷಣೆಯಿಂದ ಅಂತರ್ಜಲ ಹೆಚ್ಚಳಕ್ಕೆ ಪ್ರಯತ್ನ, ಮಳೆನೀರಿನ ಕೊಯ್ಲು.. ಹೀಗೆ ಅನೇಕ ರೀತಿಯ ಪ್ರಕೃತಿಪ್ರಿಯ ಕೆಲಸಗಳು ಜನರ ಗಮನ ಸೆಳೆಯುತ್ತಿವೆ.

ಬೆಳೆದ ಬೆಳೆ:

ದೇವೇಂದ್ರಪ್ಪ ಅವರು 100 ಎಕರೆ ಜಮೀನಿನಲ್ಲಿ ಹೊಸ ಆವಿಷ್ಕಾರ ಬಳಿಸಿಕೊಂಡು ಶ್ರೀಗಂಧ, ತೇಗ, ಪಪ್ಪಾಯಿ, ಮಾವು, ದಾಳಿಂಬೆ, ಹುಣಸೆ, ತೆಂಗು, ಬಿದಿರು, ಪೇರಲ, ಮೋಸಂಬಿ, ಬೇವು, ರಕ್ತಚಂದನ ಸೇರಿದಂತೆ ಅನೇಕ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸಿದ್ದಾರೆ. ವಿದ್ಯಾರ್ಥಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಇವರ ಜಮೀನಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಜಮೀನು ಮಾರಾಟ ಬೇಡ:

ರೈತರು ಹಣದಾಸೆಗೆ ಬಂಗಾರದ ಬೆಲೆ ಬಾಳುವ ಜಮೀನು ಮಾರಾಟ ಮಾಡಬಾರದು. ಒಕ್ಕಲುತನವೂ ಬಹಳ ಶ್ರೇಷ್ಠವಾದ ಕಾರ್ಯವಾಗಿದೆ. ಕೃಷಿ ಸಂಶೋಧಕರ ಅಭಿಪ್ರಾಯ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಆದಾಯ ಮೂಲದ ಕೃಷಿ ಕಾರ್ಯ, ಬಿತ್ತನೆ ಮಾಡಬೇಕು. ಯುವಕರು ಕೃಷಿ ಕಾಯಕಕ್ಕೆ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ದೇವೆಂದ್ರಪ್ಪ ರೈತರಿಗೆ ಕಿವಿಮಾತು ಹೇಳಿದ್ದಾರೆ.ಭೂಮಿ ಇದ್ದವರು ಎಂದಿಗೂ ಬಡವರಲ್ಲ, ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬಾರದು. ಯುವಕರು ಕೃಷಿ ಕಾಯಕಕ್ಕೆ ಹೆಚ್ಚಿಗೆ ಪ್ರಾಶಸ್ತ್ಯ ಕೊಡಬೇಕು. ಇದೀಗ ನನಗೆ ಗೌರವ ಡಾಕ್ಟರೇಟ್ ಪದವಿ ಬಂದಿರುವುದರಿಂದ ನನ್ನ ಜವಾಬ್ದಾರಿ ಹೆಚ್ಚಳವಾಗಿದ್ದು ಇದು ನಮ್ಮ ರೈತರಿಗೆ ಸಂದ ಗೌರವವಾಗಿದೆ.

ದೇವೇಂದ್ರಪ್ಪ ಬಳೂಟಗಿ ಪ್ರಗತಿಪರ ರೈತ ಕುಷ್ಟಗಿ

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ