ಜೂನ್‌ 4 ರಂದು ಲೋಕಸಭೆ ಫಲಿತಾಂಶ: ಹಾಸನದಲ್ಲಿ ನಿಷೇಧಾಜ್ಞೆ ಜಾರಿ

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಮತ ಯಂತ್ರಗಳನ್ನು ಭದ್ರವಾಗಿ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಜೂ.4ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ.ಸತ್ಯಭಾಮ ಮಾಹಿತಿ ನೀಡಿದರು. ಹಾಸನ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾಹಿತಿ । 144 ಸೆಕ್ಷೆನ್ ಜಾರಿ । ಮೊಬೈಲ್ ಬಳಕೆ ಇಲ್ಲ । ಬಿಗಿ ಪೊಲೀಸ್‌ ಬಂದೋಬಸ್ತ್‌

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭಾ ಚುನಾವಣೆ ಮುಗಿದು ಈಗಾಗಲೇ ಮತ ಯಂತ್ರಗಳನ್ನು ಭದ್ರವಾಗಿ ಎಂಜಿನಿಯರಿಂಗ್ ಕಾಲೇಜಿನ ಕೊಠಡಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಜೂ.4ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ.ಸತ್ಯಭಾಮ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿ, ಲೋಕಸಭಾ ಚುನಾವಣೆಯ ಮತದಾನದ ನಂತರ ಮತ ಯಂತ್ರಗಳನ್ನು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭದ್ರತೆಗಾಗಿ ಮೊಹರು ಮಾಡಿದ ಕೊಠಡಿಯಲ್ಲಿ ಶೇಖರಿಸಿಡಲಾಗಿದೆ. ಜೂ.4ರಂದು ಬೆಳಿಗ್ಗೆ ಸಾಮಾನ್ಯ ವೀಕ್ಷಕರು ಮತ್ತು ಹಾಜರಿದ್ದ ಅಭ್ಯರ್ಥಿಗಳ ಸಮಕ್ಷಮದಲ್ಲಿ ಭದ್ರತಾ ಕೊಠಡಿಯನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಗುವುದು. ಬೆಳಿಗ್ಗೆ 8 ಗಂಟೆಯಿಂದ ಅಂಚೆ ಮತ ಪತ್ರಗಳ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳಿಂದ ಎಣಿಕೆ ಕಾರ್ಯವನ್ನು ಪ್ರಾರಂಭಿಸಲಾಗುವುದು. ಪ್ರತಿ ಸುತ್ತುವಾರು, ಮತ ಎಣಿಕೆ ವಿವರವನ್ನು ಮೈಕ್ ಮೂಲಕ ಪ್ರಚಾರಪಡಿಸಲಾಗುವುದು. ಸಹಾಯಕ ಚುನಾವಣಾಧಿಕಾರಿಗಳಿಂದ ಚುನಾವಣಾಧಿಕಾರಿಗಳಿಗೆ ನಂತರ ಚುನಾವಣಾ ವೀಕ್ಷಕರ ಅನುಮೋದನೆ ಪಡೆದ ನಂತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಹಾಸನ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳನ್ನು ನಿಗದಿಪಡಿಸಲಾಗಿದ್ದು, (14*8=112+14=126 ಟೇಬಲ್) ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ಸುತ್ತುಗಳನ್ನು ನಿಗದಿಪಡಿಸಿದೆ. ಚುನಾವಣಾ ಅಭ್ಯರ್ಥಿಗಳು / ಚುನಾವಣಾ ಅಧಿಕೃತ ಏಜೆಂಟರು ನಮೂನೆ-18ರಲ್ಲಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಬಣ್ಣದ ಗುರುತಿನ ಚೀಟಿಯನ್ನು ಕೌಟಿಂಗ್ ಏಜೆಂಟ್‌ರವರಿಗೆ ಒದಗಿಸಲಾಗುವುದು. ಸದರಿಯವರು ಅವರಿಗೆ ನಿಗದಿಪಡಿಸಿರುವ ವಿಧಾನಸಭಾ ಕ್ಷೇತ್ರವಾರು ನಿಗದಿಯಾಗಿರುವಂತೆ ಗುರುತಿನ ಚೀಟಿಯನ್ನು ತೋರಿಸಿ ಎಣಿಕೆ ಕೊಠಡಿಯನ್ನು ಪ್ರವೇಶ ಮಾಡಬಹುದಾಗಿದೆ ಎಂದು ಹೇಳಿದರು.

ಎಣಿಕಾ ಕೆಂದ್ರಕ್ಕೆ ಕಡ್ಡಾಯವಾಗಿ ಮೊಬೈಲ್, ನೀರಿನ ಬಾಟಲ್, ಬೆಂಕಿ ಪೊಟ್ಟಣ, ಲೈಟರ್, ಧೂಮಪಾನ, ಹರಿತವಾದ ಆಯುಧಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ಇಂತಹ ವಸ್ತುಗಳನ್ನು ತರದಂತೆ ತಿಳಿಸಿದೆ. ಟೇಬಲ್‌ಗಳ ಸುತ್ತಲೂ ಹಾಕಿರುವ ವೈರ್ ಮೆಷ್‌ನ್ನು ದಾಟಿ ಹೋಗಲು ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಮತಯಂತ್ರಗಳನ್ನು ಭೌತಿಕವಾಗಿ ಮುಟ್ಟಲು ಏಜೆಂಟರುಗಳಿಗೆ ಅವಕಾಶ ನೀಡಲಾಗುವುದಿಲ್ಲ. ಎಣಿಕಾ ಕೇಂದ್ರ ಮತ್ತು ಎಣಿಕಾ ಕಾರ್ಯದ ಎಲ್ಲಾ ಪ್ರಕ್ರಿಯೆಯನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಕೈಗೊಳ್ಳಲಾಗುವುದು ಹಾಗೂ ಎಣಿಕಾ ಕೇಂದ್ರದ ಸುತ್ತ ಭದ್ರತೆಯನ್ನು ಒದಗಿಸಲಾಗಿರುತ್ತದೆ. ಪ್ರತ್ಯೇಕ ಪೈಡ್ ಫುಡ್ ಕೌಂಟರ್ ಮತ್ತು ಪ್ರತ್ಯೇಕ ಕ್ಯಾಂಡಿಡೇಟ್ ಫಿಸಿಲಿಟೇಷನ್ ಕೇಂದ್ರವನ್ನು ಕೊಠಡಿ ಸಂಖ್ಯೆ 137 ರಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಮಾಹಿತಿ ಕೇಂದ್ರದಿಂದ ಮತದಾರರ/ಸಾರ್ವಜನಿಕರ ಸಹಾಯವಾಣಿ 1950 ಆಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಿಲ್ಲಾ ಮಾಹಿತಿ ಕೇಂದ್ರವೆಂಬ ಮತದಾರರ ಸಹಾಯವಾಣಿ 1950 ಕೇಂದ್ರವನ್ನು ಕಂಟ್ರೋಲ್‌ ರೂಮ್ ಸ್ಥಾಪಿಸಲಾಗಿರುತ್ತದೆ. ಈ ಕೇಂದ್ರಕ್ಕೆ ಸಾರ್ವಜನಿಕರು ಉಚಿತ ಕರೆಗಳನ್ನು ಮಾಡಬಹುದಾಗಿದ್ದು, ಚುನಾವಣೆ ಸಂಬಂಧ ದೂರುಗಳನ್ನು ಸಲ್ಲಿಸಬಹುದಾಗಿದೆ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಮಾತನಾಡಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧಪಡಿಸಲಾಗಿದೆ. ನಮ್ಮ ಪೊಲೀಸ್ ಕಡೆಯಿಂದ 200 ರಿಂದ 250 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಎರಡು ಕಡೆ ಒಳ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಒಂದು ಕಡೆ ಅಭ್ಯರ್ಥಿ ಹಾಗೂ ಏಜೆಂಟ್ ಪ್ರವೇಶ. ಇನ್ನೊಂದು ಕಡೆ ಅಧಿಕಾರಿಗಳು ಬಂದು ಹೋಗಲು ಅವಕಾಶ ಕಲ್ಪಿಸಲಾಗಿದೆ. ಮತ ಎಣಿಕೆ ವೇಳೆ 144 ಸೆಕ್ಷೆನ್ ಜಾರಿಯಲ್ಲಿದ್ದು, ಯಾರು ಕೂಡ ಗುಂಪಾಗಿ ವಿಜಯೋತ್ಸವ ಮಾಡಲು ಅವಕಾಶ ಇರುವುದಿಲ್ಲ. ಈ ಬಗ್ಗೆ ನಿಗಾವಹಿಸಲಾಗುವುದು ಎಂದು ಎಚ್ಚರಿಸಿದರು.

ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಇತರರು ಇದ್ದರು.

Share this article