ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗಾಗಿ ಜಮೀನು ಕಳೆದುಕೊಳ್ಳುವ ರೈತರಿಗೆ ನ್ಯಾಯಯುತ ಪರಿಹಾರ, ಪುನರ್‌ವಸತಿ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ವಿಧಾನಸೌಧದಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ನಮ್ಮ ಸರ್ಕಾರದ ವಾಗ್ದಾನ. ಮುಳುಗಡೆ ಹೊಂದಲಿರುವ ಜಮೀನನ್ನು 2 ಹಂತದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸುವ ಬದಲು ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇದರಂತೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಯೋಜನಾ ಮೊತ್ತ ಹೆಚ್ಚಳ:ಯೋಜನೆ ಅನುಷ್ಠಾನಕ್ಕೆ ಆರಂಭದಲ್ಲಿ ₹51,148 ಕೋಟಿ ಯೋಜನಾ ಮೊತ್ತ ಅಂದಾಜಿಸಲಾಗಿತ್ತು. ಇದರಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ₹17,627 ಕೋಟಿ ಎಂದು ಅಂದಾಜಿಸಿದ್ದೆವು. ಆದರೆ ಈಗ ಭೂಸ್ವಾಧೀನ ಮೊತ್ತವೇ ₹40,557 ಕೋಟಿಗೆ ಪರಿಷ್ಕರಣೆ ಆಗಿರುವುದರಿಂದ ಒಟ್ಟು ಮೊತ್ತ ₹87,818 ಕೋಟಿಗೆ ಅಂದಾಜಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ 9 ಉಪ ಯೋಜನಾ ಸಿವಿಲ್ ಕಾಮಗಾರಿಗಳಿಗೆ ಪರಿಷ್ಕೃತ ಅಂದಾಜು ಮೊತ್ತ ₹25,122.53 ಕೋಟಿ ಅಂದಾಜಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ವಿವರಣೆ ನೀಡಿದರು.
5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ:ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕಾಗಿ 130 ಟಿಎಂಸಿ ನೀರಿನ ಹಂಚಿಕೆ ಮಾಡಿದ್ದು, ಇದರಿಂದ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಾಧ್ಯವಾಗಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3ರಲ್ಲಿ ನೀರಿನ ಬಳಕೆಗಾಗಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟ 519 ಮೀಟರ್ ನಿಂದ 524 ಮೀಟರ್ ಗೆ ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100 ಟಿಎಂಸಿ ನೀರಿನ ಪ್ರಮಾಣ ಸಂಗ್ರಹ ಅಂದಾಜಿಸಲಾಗಿದೆ.
ಯೋಜನೆ ಅನುಷ್ಠಾನಕ್ಕೆ ಒಟ್ಟು 1,33,867 ಎಕರೆ ಜಮೀನು ಭೂಸ್ವಾಧೀನ ಅಗತ್ಯವಿದ್ದು, ಇದರಲ್ಲಿ 75,563 ಎಕರೆ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನು ಸಹ ಸೇರಿದೆ. ಇದುವರೆಗೆ 29,566 ಎಕರೆ ಭೂಸ್ವಾಧೀನ ಐತೀರ್ಪು ಹೊರಡಿಸಲಾಗಿದ್ದು, 59,354 ಎಕ್ರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ವಿವರಣೆ ನೀಡಿದರು.ಸಭೆಯಲ್ಲಿ ಬೃಹತ್ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಕೃಷ್ಣಾ ಭಾಗದ ಶಾಸಕರು ಸೇರಿ ಹಲವರು ಭಾಗವಹಿಸಿದ್ದರು.
ಒಟ್ಟು ಭೂಸ್ವಾಧೀನಕ್ಕೆ₹2 ಲಕ್ಷ ಕೋಟಿ ವೆಚ್ಚ?ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ಮೊತ್ತ ₹17,000 ಕೋಟಿ ಮಾತ್ರ. ಭೂಸ್ವಾಧೀನ ಸೇರಿ ಯೋಜನೆಯ ಅಂದಾಜು ಒಟ್ಟು ವೆಚ್ಚ ₹51,000 ಕೋಟಿ ಮಾತ್ರ. ಆದರೆ, ಭೂ ಸ್ವಾಧೀನಕ್ಕೆ ಮಾತ್ರವೇ ₹2.01 ಲಕ್ಷ ಕೋಟಿ ಆಗಲಿದೆ.
ಈಗಾಗಲೇ 29,400 ಎಕರೆ ಭೂ ಸ್ವಾಧೀನಗೊಂಡಿದ್ದು, ₹66,000 ಕೋಟಿಯನ್ನು ಪರಿಹಾರವಾಗಿ ನೀಡಬೇಕಿದೆ. ಜತೆಗೆ ಇನ್ನೂ 1.04 ಲಕ್ಷ ಎಕರೆ ಭೂಮಿ ಸ್ವಾಧೀನಗೊಳ್ಳಬೇಕಿದ್ದು, ಅಷ್ಟೂ ಭೂಮಿಗೆ ನ್ಯಾಯಾಲಯ ನಿಗದಿಪಡಿಸಿರುವ ದರದಲ್ಲೇ ಪರಿಹಾರ ನೀಡಿದರೂ ಅದಕ್ಕೆ ಸುಮಾರು ₹2.01 ಲಕ್ಷ ಕೋಟಿ ಹಣ ಖರ್ಚಾಗಲಿದೆ. ಆದರೆ ಈ ಕುರಿತು ಸಭೆಯಲ್ಲಿ ಚರ್ಚೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.