ಅಡಕೆ ಆಮದು ತಡೆಗೆ ಕಟ್ಟುನಿಟ್ಟಿನ ಕ್ರಮದ ಭರವಸೆ

KannadaprabhaNewsNetwork |  
Published : Dec 29, 2024, 01:16 AM IST
ಅಡಕೆ | Kannada Prabha

ಸಾರಾಂಶ

ಅಕ್ರಮ ಆಮದು ತಡೆಗೆ ಸಿಬಿಐಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಅಡಕೆಯ ಕನಿಷ್ಠ ಆಮದು ಬೆಲೆ ಪರಿಷ್ಕರಣೆಗೆ ಶಿಫಾರಸು ಮಾಡಲಾಗುವುದು ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರಸಿ: ಅಕ್ರಮ ಆಮದು ತಡೆಗೆ ಸಿಬಿಐಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜತೆಗೆ ಅಡಕೆಯ ಕನಿಷ್ಠ ಆಮದು ಬೆಲೆ ಪರಿಷ್ಕರಣೆಗೆ ಶಿಫಾರಸು ಮಾಡಲಾಗುವುದು ಎಂದು ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆ. 26ರಂದು ಈ ಸಂಬಂಧ ಬರೆದ ಪತ್ರಕ್ಕೆ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ.

ನೆರೆ ದೇಶಗಳಿಂದ ಅಡಕೆ ಅಕ್ರಮವಾಗಿ ದೇಶದ ಒಳನುಸುಳುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಅಡಕೆ ಒಂದು ಸೂಕ್ಷ್ಮ ಸಾಮಗ್ರಿಯಾಗಿದೆ. ಅಡಕೆಯ ಆಮದನ್ನು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆಮದು ನೀತಿಯನ್ನು ಕಟ್ಟುನಿಟ್ಟಾಗಿ ವಿಶ್ಲೇಷಿಸಿ, ವಿವಿಧ ದೇಶಗಳ ನಡುವಿನ ಒಪ್ಪಂದ (ಸಿಒಒ) ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಅಡಕೆ ಅಕ್ರಮ ಆಮದು ಆಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ (ಸಿಬಿಐಸಿ) ಅಕ್ರಮ ಆಮದನ್ನು ತಡೆಯಲು ದೇಶದ ಗಡಿಯಲ್ಲಿ ಗಸ್ತು ವ್ಯವಸ್ಥಿತವಾಗಿ ನಡೆಸುತ್ತಿವೆ. ಮುಖ್ಯವಾಗಿ ಭಾರತ-ಮ್ಯಾನ್‌ಮಾರ್‌ ಮತ್ತು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಅದರ ಪರಿಣಾಮವಾಗಿ ಈ ಆರ್ಥಿಕ ವರ್ಷದಲ್ಲಿ ಸೆಪ್ಟೆಂಬರ್‌ ಅಂತ್ಯದವರೆಗೆ ₹264.26 ಕೋಟಿ ಮೌಲ್ಯದ ಅಕ್ರಮವಾಗಿ ಆಮದಾಗಿರುವ ಅಡಕೆಯನ್ನು ಸಿಬಿಐಸಿ ವಶಕ್ಕೆ ಪಡೆದಿದೆ. ಇತ್ತೀಚೆಗೆ ಆಗಸ್ಟ್‌ ತಿಂಗಳಲ್ಲಿ ತಪ್ಪಾಗಿ ತೆರಿಗೆ ಘೋಷಿಸಿ, ದೇಶದೊಳಕ್ಕೆ ಬರುತ್ತಿದ್ದ ₹9.75 ಕೋಟಿ ಮೌಲ್ಯದ 7 ಕಂಟೇನರ್‌ಗಳಲ್ಲಿ ತುಂಬಿದ್ದ 168.45 ಮೆಟ್ರಿಕ್‌ ಟನ್‌ ಅಡಕೆಯನ್ನು ಚೆನ್ನೈ ಬಂದರಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಅಡಕೆಗೆ ನಿಗದಿಯಾಗಿರುವ ಕನಿಷ್ಠ ಆಮದು ಬೆಲೆ (ಎಂಐಪಿ) ಪರಿಷ್ಕರಣೆ ಸಂಬಂಧ ಕೃಷಿ ಮತ್ತು ಕೃಷಿಕ ಕಲ್ಯಾಣ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಪಂಕಜ್‌ ಚೌಧರಿ ತಿಳಿಸಿದ್ದಾರೆ.

ಎಂಐಪಿ ಪರಿಷ್ಕರಣೆ ಸಂಬಂಧ ವಿದೇಶಿ ವ್ಯವಹಾರಗಳ ನಿರ್ದೇಶನಾಲಯ (ಡಿಜಿಎಫ್‌ಟಿ) ಪರಿಶೀಲನೆಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಪಂಕಜ್‌ ಚೌಧರಿ ಅವರು ಸಂಸದ ಕಾಗೇರಿ ಅವರಿಗೆ ಪತ್ರ ಮುಖೇನ ತಿಳಿಸಿದ್ದಾರೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ