ಕೆರೆಗಳ ಭರ್ತಿಗೆ ಭರವಸೆ: ಧರಣಿ ಹಿಂದಕ್ಕೆ

KannadaprabhaNewsNetwork | Published : Mar 7, 2025 12:50 AM

ಸಾರಾಂಶ

ಕೆಬಿಜೆಎನ್‌ಎಲ್, ಪೊಲೀಸ್ ಅಧಿಕಾರಿಗಳು ರೈತರೊಂದಿಗೆ ಮಾತನಾಡಿ, ವಾರದಲ್ಲಿ ಕಾಲುವೆಗೆ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುಔಊದು ಎಂದು ಭರವಸೆ ನೀಡಿದ ಮೇರೆಗೆ ಧರಣಿ ಹಿಂಪಡೆಯಲಾಯಿತು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಪರಮಾನಂದ ವೃತ್ತದ ಹತ್ತಿರ ರೈತ ಬಾಂಧವರು ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯ ಎಲ್ಲ ಕೆರೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಗುರುವಾರ ಆರಂಭಿಸಿದ ಧರಣಿ ಸ್ಥಳಕ್ಕೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಭೇಟಿ ನೀಡಿ ಕೆರೆಗಳನ್ನು ಭರ್ತಿ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಬಾಂಧವರು ಧರಣಿ ಹಿಂಪಡೆದುಕೊಂಡರು.

ಧರಣಿ ಆರಂಭವಾಗುವ ಮುನ್ನ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿ ಪರಮಾನಂದ ವೃತ್ತದಲ್ಲಿ ಹಾಕಲಾಗಿದ್ದ ಶಾಮಿಯಾನದಲ್ಲಿ ಸ್ಥಳದಲ್ಲಿ ರೈತರು ಧರಣಿ ಆರಂಭಿಸಿದರು. ಧರಣಿ ಆರಂಭಿಸಿದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಕೆಬಿಜೆಎನ್‌ಎಲ್, ಪೊಲೀಸ್ ಅಧಿಕಾರಿಗಳು ರೈತರೊಂದಿಗೆ ಮಾತನಾಡಿ, ವಾರದಲ್ಲಿ ಕಾಲುವೆಗೆ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದ ಮೇರೆಗೆ ಧರಣಿ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಪ್ರತಿಬಾರಿ ನೀರುವ ಹರಿಸುವ ಸಂದರ್ಭದಲ್ಲಿ ಹೂವಿನಹಿಪ್ಪರಗಿ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ಒಂದು ತೊಟ್ಟು ನೀರು ಬರುವುದಿಲ್ಲ. ಕೆಲ ಕಿಡಿಗೇಡಿಗಳು ನೀರು ಪೋಲು ಮಾಡುತ್ತಿರುವುದರಿಂದಾಗಿ ಸರಾಗವಾಗಿ ಕೆರೆಗಳಿಗೆ ನೀರು ತಲುಪುತ್ತಿಲ್ಲ. ಇದರಿಂದಾಗಿ ಹೂವಿನಹಿಪ್ಪರಗಿ ಭಾಗದ ಜನ, ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು. ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಕೆರೆಗಳಲ್ಲಿ ಹನಿ ನೀರಿಲ್ಲ. ಕೂಡಲೇ ಕೆರೆಗಳಿಗೆ ನೀರು ಹರಿಸುವ ಮೂಲಕ ಜನ, ಜಾನುವಾರುಗಳಿಗೆ ಬೇಸಿಗೆ ಕಾಲದಲ್ಲಿ ನೀರು ಸಿಗುವಂತೆ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ, ಕಾರ್ಯನಿರ್ವಾಹಕ ಅಭಿಯಂತರ ಶೇಗುಣಸಿ, ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೂಳಿಬಾವಿ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ಗುರುಶಾತಂ ದಾಶ್ಯಾಳ, ರೈತ ಸಂಘದ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ತಾಳಿಕೋಟಿ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ರಾಮನಗೌಡ ಹಾದಿಮನಿ, ಬಸನಗೌಡ ಪಾಟೀಲ, ಮೋಹನಗೌಡ ಪಾಟೀಲ, ಅಣ್ಣಪ್ಪ ರಾಠೋಡ, ಬಸವರಾಜ ಗುಂಡಳ್ಳಿ, ವೀರಭದ್ರಮ್ಮ ಚಿಕ್ಕಮಠ, ಮಲ್ಲನಗೌಡ ನಾಡಗೌಡ, ಹಣಮಂತರಾಯ ಗುಣಕಿ, ರಮೇಶ ಕೋರಿ, ಗುರುಲಿಂಗಪ್ಪ ಕುಳಗೇರಿ, ರಮೇಶ ಕೋರಿ, ಕುಮಾರಗೌಡ ಪಾಟೀಲ, ಬಸನಗೌಡ ಬಿರಾದಾರ, ಶಬ್ಬೀರ ಮುಲ್ಲಾ, ಮಹಾದೇವಪ್ಪ ಭಜಂತ್ರಿ, ಶರಣಪ್ಪ ಕೋಲಕಾರ, ಕಾಂತು ಪಟ್ಟಣಶೆಟ್ಟಿ ಇತರರು ಇದ್ದರು.

Share this article