ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಲು ಸುಗ್ರೀವಾಜ್ಞೆ ಹೊರಡಿಸಬೇಕು ಹಾಗೂ ತಾಲೂಕಿನ ಬಗರ್ ಹುಕುಂ ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಹಕ್ಕು ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚನವಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಶನಿವಾರ ರಾಣಿಬೆನ್ನೂರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನೀಡಲು ಸುಗ್ರೀವಾಜ್ಞೆ ಹೊರಡಿಸಬೇಕು ಹಾಗೂ ತಾಲೂಕಿನ ಬಗರ್ ಹುಕುಂ ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಹಕ್ಕು ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚನವಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಶನಿವಾರ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ರೈತ ಸಂಘದ ಜಿಲ್ಲಾ ಮುಖಂಡ ಪರಮೇಶ ಚಿನ್ನಣ್ಣನವರ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ಗೆ ಬತ್ತಕ್ಕೆ ₹2320 ಕನಿಷ್ಠ ಬೆಂಬಲ ಬೆಲೆಗೆ ನಿಗದಿ ಮಾಡಿದೆ. ಆದರೆ ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಖರೀದಿದಾರರು ದಲ್ಲಾಳಿಗಳು, ಕಂಪನಿಯ ಖರೀದಿದಾರರು ಮನಸೋಇಚ್ಛೆ ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್.ಎನ್.ಆರ್. ಸೋನಾ ಮುಸರಿ ಬತ್ತಕ್ಕೆ ₹1600ರಿಂದ ₹1700 ದರ ಇದೆ. ರೈತರು ಒಂದು ಎಕರೆಯಲ್ಲಿ ಬತ್ತ ಬೆಳೆಯಲು ₹40ರಿಂದ ₹45 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಬೇಸಿಗೆ ಮತ್ತು ಮಳೆಗಾಲದ ಬತ್ತ ಸರಾಸರಿ ಪರಿಗಣಿಸಿದರೆ ಎಕರೆಗೆ 25 ಕ್ವಿಂಟಲ್ ಇಳುವರಿ ಬರುತ್ತದೆ. ₹1600 ದರದಲ್ಲಿ ಬತ್ತ ನಾಟಿ ಮಾರಾಟ ಮಾಡಿದರೆ ₹40 ಸಾವಿರ ಆದಾಯ ಬರುತ್ತದೆ. ಆದರೆ ರೈತನ ವೆಚ್ಚ ₹46 ಸಾವಿರ ಆಗುತ್ತದೆ. ಒಟ್ಟಾರೆ ಪ್ರತಿ ಎಕರೆಗೆ ₹ 6 ಸಾವಿರ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಪ್ರತಿ ಕ್ವಿಂಟಲ್ ಬತ್ತಕ್ಕೆ ಕೇರಳ ಮಾದರಿಯಲ್ಲಿ ₹1200 ಪ್ರೋತ್ಸಾಹಧನ ನೀಡಬೇಕು. ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ ಎರಡು ಸೇರಿ ಪ್ರತಿ ಕ್ವಿಂಟಲ್ ಬತ್ತಕ್ಕೆ ₹3500 ನೀಡಬೇಕು. ಇದರಿಂದ ರೈತನಿಗೆ ಬೆಳೆ ನಷ್ಟ ಸರಿದೂಗಿಸಲು ಸ್ವಲ್ಪ ಅನುಕೂಲವಾಗುತ್ತದೆ. 3 ವರ್ಷಗಳ ಕಾಲ ನಿರಂತರ- ಹೋರಾಟ ಮಾಡಿದರು ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿ ಮಾಡಿಲ್ಲ. ರಾಜ್ಯ ಸರ್ಕಾರ ಜಾತಿಗಣತಿಯನ್ನು ಹಠಕ್ಕೆ ಬಿದ್ದು ಮಾಡಿಸಿದೆ. ಅದೇ ರೀತಿ ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಒಂದು ಕಾಯ್ದೆ ಜಾರಿ ತರಬೇಕು ಎಂದರು.
ತಾಲೂಕು ಮುಖಂಡ ಬಸವರಾಜಪ್ಪ ಲಗುಬಗಿ ಮಾತನಾಡಿ, ತಾಲೂಕಿನಲ್ಲಿ ಸುಮಾರು ಮೂರು ತಲೆಮಾರು ಬಗರ ಹುಕುಂ ಮತ್ತು ಅರಣ್ಯ ಸಾಗುವಳಿ ಮಾಡಿದ ರೈತರಿಗೆ ಸುಮಾರು 20 ವರ್ಷ ಹೋರಾಟ ಮಾಡಿದರೂ ಒಂದು ಹಕ್ಕುಪತ್ರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.