ಬ್ಯಾಡಗಿ: ವಕ್ಫ್ ಹೆಸರಿನಲ್ಲಿ ಕಳೆದ 75 ವರ್ಷದಿಂದ ದೇಶದಲ್ಲಿರುವ ಬಡ ಮುಸ್ಲಿಂ ಕುಟುಂಬಗಳ ಆಸ್ತಿಯನ್ನು ಕಬಳಿಸಲಾಗಿದೆ. ವಕ್ಫ್ ತಿದ್ದುಪಡಿ ಬಿಲ್‌ನ ಸಂಪೂರ್ಣ ವಿವರಗಳು ಹೊರಬಂದಾಗ ಮುಸ್ಲಿಂ ಸಮುದಾಯವೇ ಅದನ್ನು ಮುಕ್ತವಾಗಿ ಸ್ವಾಗತಿಸಲಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರು ಕೋಟ್ಯಂತರ ರು. ಮೌಲ್ಯದ ಆಸ್ತಿಗಳನ್ನು ಕಬಳಿಸಿದ್ದಾರೆ. ಹೀಗಾಗಿ ವಕ್ಫ್ ಬಿಲ್ ವಿರುದ್ಧವಾಗಿ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಮತ ಚಲಾಯಿಸಿದ್ದಾರೆ. ಮುಸ್ಲಿಂ ಸಮುದಾಯದವರ ಆಸ್ತಿ ಕಬಳಿಸಲು ಮಸೂದೆ ಜಾರಿಗೊಳಿಸುವುದಿಲ್ಲ. ವಕ್ಫ್ ಆಸ್ತಿಗಳನ್ನು ಕಾನೂನುಬದ್ಧಗೊಳಿಸಲು ಈ ಕಾನೂನು ಎಂದರು.
ಬಡ ಮುಸ್ಲಿಮರಿಗೆ ನ್ಯಾಯ: ವಕ್ಫ್ ಬಿಲ್ ಜಾರಿಗೊಳಿಸುವ ಮೂಲಕ ಬಡ ಮುಸ್ಲಿಂ ಕುಟುಂಬಗಳ ರಕ್ಷಣೆಯೊಂದಿಗೆ ನ್ಯಾಯ ಒದಗಿಸಲಾಗುವುದು. ಪಾರದರ್ಶಕವಾಗಿ ವಕ್ಫ್ ಆಸ್ತಿಗಳನ್ನು ರಕ್ಷಣೆ ಮಾಡಲು ಮಸೂದೆಯನ್ನು ಜಾರಿಗೊಳಿಸಿದ್ದು, ಮುಸ್ಲಿಮರ ವಿರುದ್ಧವಲ್ಲ. ಕಾಂಗ್ರೆಸ್ ಮುಖಂಡರ ಕಪೋಲಕಲ್ಪಿತ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಯಾರೂ ನಂಬದಂತೆ ಮನವಿ ಮಾಡಿದರು.
ಏನೂ ಆಗುವುದಿಲ್ಲ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಂ ಸಮುದಾಯದ ವೋಟ್ ಬ್ಯಾಂಕ್ ಮಾಡಿಕೊಂಡಿದ್ದ ವಿರೋಧ ಪಕ್ಷಗಳ ಮುಖವಾಡವನ್ನು ಪ್ರಧಾನಿ ನರೇಂದ್ರ ಮೋದಿ ಒಂದೊಂದಾಗಿ ಕಳಚುತ್ತಿದ್ದಾರೆ. ಮುಸ್ಲಿಂ ಮಹಿಳೆಯರ ರಕ್ಷಣೆಗೆ ತಂದ ತ್ರಿವಳಿ ತಲಾಖ್ ನಿಷೇಧ, ರಿಪಬ್ಲಿಕ್ ಕಾಶ್ಮೀರ ಸಲುವಾಗಿ ಆರ್ಟಿಕಲ್ 370 ರದ್ದುಪಡಿಸಿದಾಗಲೂ ದೇಶದಲ್ಲಿ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಬೊಬ್ಬೆ ಹೊಡೆದರು ಇದೀಗ ಎಲ್ಲರೂ ಮೆತ್ತಗಾಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ನಿಧಾನವಾಗಿ ಎಲ್ಲವೂ ಅರ್ಥವಾಗುತ್ತಿದೆ ಎಂದರು.
ನವೀನ್ ಆತ್ಮಹತ್ಯೆ ಸಿಬಿಐಗೆ ಒಪ್ಪಿಸಿ: ಕೊಡಗಿನ ಬಿಜೆಪಿ ಯುವ ಮುಖಂಡ ವಿನಯ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಪ್ರಕರಣದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ಕೈವಾಡವಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದ್ದು, ಕೂಡಲೇ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿದರು.
ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಆದ್ಯತೆ
ಹಾನಗಲ್ಲ: ತಾಲೂಕಿನ ಬಾಳಂಬೀಡ ಗ್ರಾಮದ ಬಳಿ ಪಂಚಾಯತರಾಜ್ ಇಂಜನಿಯರಿಂಗ್ ವಿಭಾಗದಿಂದ 2023- 24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ₹65 ಲಕ್ಷ ವೆಚ್ಚದಲ್ಲಿ ಬಾಳಂಬೀಡ- ಚನ್ನಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನ ಹಲವೆಡೆ ಗ್ರಾಮೀಣ ಭಾಗದ ರಸ್ತೆಗಳು ಆಧುನಿಕ ಸ್ವರೂಪ ಹೊಂದುತ್ತಿದ್ದು, ಬಹಳ ದಿನಗಳಿಂದ ಹಾಳಾಗಿ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಗಿದ್ದ ಬಾಳಂಬೀಡ- ಚನ್ನಾಪುರ ರಸ್ತೆಯನ್ನು ಅಭಿವೃದ್ಧಿಪಡಿಸಿ, ಹೊಸರೂಪ ನೀಡಲಾಗುತ್ತಿದೆ. ಸಂಪರ್ಕ ರಸ್ತೆಗಳ ಸುಧಾರಣೆಯಿಂದ ಗ್ರಾಮೀಣರ ಬದುಕಿನ ಚಿತ್ರಣ ಬದಲಾಗಲಿದೆ. ಹಾಗಾಗಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ತಾಲೂಕಿನಲ್ಲಿ ಇನ್ನಷ್ಟು ರಸ್ತೆಗಳ ಅಭಿವೃದ್ಧಿಗೆ ಶೀಘ್ರ ಮತ್ತೆ ಅನುದಾನ ದೊರಕುವ ವಿಶ್ವಾಸವಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು.ಗ್ರಾಪಂ ಸದಸ್ಯ ಭರಮಗೌಡ ನಂದಿಹಳ್ಳಿ, ಜಿಪಂ ಮಾಜಿ ಸದಸ್ಯ ಎಂ.ಎಂ. ಕಂಬಳಿ, ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ, ಮುಖಂಡರಾದ ಅಶೋಕ ಮೋರೆ, ಮಂಜಣ್ಣ ತಡಸದ, ನಾಗಯ್ಯ ಹಿರೇಮಠಮ ರಾಜೇಂದ್ರ ಜಿನ್ನಣ್ಣನವರ, ಮಹ್ಮದ್‌ರಫೀಕ್ ಉಪ್ಪುಣಸಿ, ಇಸ್ಮೈಲ್ ಹಲಸೂರ, ನಿಂಗಪ್ಪ ನಂದಿಹಳ್ಳಿ, ಮಾರುತಿ ದೇವಸೂರ, ಮಕ್ಬೂಲ್‌ಅಹ್ಮದ್ ಚಂದ್ರಗಿರಿ, ಮೌಲಾಸಾಬ ನರೇಗಲ್, ಹಜರತ್‌ಅಲಿ ನರೇಗಲ್, ನಾಗರಾಜ ಬೊಮ್ಮಣ್ಣನವರ, ಫಕ್ಕೀರಪ್ಪ ಚಿಕ್ಕಜ್ಜನವರ, ಮಾರುತಿ ನಂದಿಹಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.