ದೃಶ್ಯಕಲಾ ಮಹಾವಿದ್ಯಾಲಯದ ಆಸ್ತಿ ರಕ್ಷಣೆ ಮುಖ್ಯ

KannadaprabhaNewsNetwork |  
Published : Jan 12, 2025, 01:18 AM IST
ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ, ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಕ್ಲಾಪ್ ಮಾಡುವ ಮೂಲಕ ಉದ್ಘಾಟಿಸಿದ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್.  | Kannada Prabha

ಸಾರಾಂಶ

ದಾವಣಗೆರೆ: ರಾಜ್ಯದ ಪ್ರತಿಷ್ಠಿತ ಸರ್ಕಾರಿ ಕಾಲೇಜೆಂಬ ಖ್ಯಾತಿಯ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯ ಇಲ್ಲಿವರೆಗೆ ಎಕರೆಗಟ್ಟಲೇ ಜಾಗ ಕಳೆದುಕೊಂಡಿದ್ದು, ಇಂತಹ ಕಾಲೇಜಿನ ಒಂದಿಂಚು ಭೂಮಿಯೂ ಪರರ ಪಾಲಾಗದಂತೆ ಕಾಪಾಡಿಕೊಳ್ಳುವತ್ತ ಕಾಲೇಜು ಹಾಗೂ ದಾವಿವಿ ಗಮನ ಹರಿಸಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ತಿಳಿಸಿದರು.

ದಾವಣಗೆರೆ: ರಾಜ್ಯದ ಪ್ರತಿಷ್ಠಿತ ಸರ್ಕಾರಿ ಕಾಲೇಜೆಂಬ ಖ್ಯಾತಿಯ ದಾವಣಗೆರೆ ದೃಶ್ಯಕಲಾ ಮಹಾ ವಿದ್ಯಾಲಯ ಇಲ್ಲಿವರೆಗೆ ಎಕರೆಗಟ್ಟಲೇ ಜಾಗ ಕಳೆದುಕೊಂಡಿದ್ದು, ಇಂತಹ ಕಾಲೇಜಿನ ಒಂದಿಂಚು ಭೂಮಿಯೂ ಪರರ ಪಾಲಾಗದಂತೆ ಕಾಪಾಡಿಕೊಳ್ಳುವತ್ತ ಕಾಲೇಜು ಹಾಗೂ ದಾವಿವಿ ಗಮನ ಹರಿಸಬೇಕು ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ತಿಳಿಸಿದರು.ನಗರದ ದಾವಿವಿ ವಿಶ್ವ ವಿದ್ಯಾನಿಲಯ ದೃಶ್ಯಕಲಾ ಮಹಾ ವಿದ್ಯಾಲಯದ ವಜ್ರ ಮಹೋತ್ಸವ ಅಂಗವಾಗಿ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಚಿತ್ರಪಯಣವನ್ನು ವಿನೂತನವಾಗಿ ಕ್ಲಾಪ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೃಶ್ಯಕಲಾ ಮಹಾ ವಿದ್ಯಾಲಯ ಇಲ್ಲಿ ಪಡೆದು ಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಇನ್ನು ಮುಂದೆ ಒಂದಿಂಚು ಭೂಮಿಯೂ ಕಾಲೇಜಿನ ಕೈತಪ್ಪದಂತೆ ಜಾಗ್ರತೆ ವಹಿಸಿ ಎಂದರು.

ದೃಶ್ಯಕಲಾ ಮಹಾ ವಿದ್ಯಾಲಯ ಹಾಗೂ ಸರ್ಕಾರಿ ಯುಬಿಡಿಟಿ ಕಾಲೇಜುಗಳು ದಾವಣಗೆರೆಯ ಎರಡು ಕಣ್ಣುಗಳಿದ್ದಂತೆ. ಜಿಲ್ಲೆಯ ಹೆಮ್ಮೆಯಾದ ಈ ಕಾಲೇಜಿನಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ಇಂದು ರಾಜ್ಯ, ರಾಷ್ಟ್ರ, ಪರರಾಷ್ಟ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಇಂದಿಗೂ ತಮ್ಮ ಕಾಲೇಜಿನೊಂದಿಗೆ ಒಡನಾಟ ಹೊಂದಿದ್ದಾರೆ. ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಈ ಎರಡೂ ಕಾಲೇಜುಗಳ ಕೊಡುಗೆಯೂ ಗಣನೀಯವಾಗಿದೆ. ಇಂತಹ ಕಾಲೇಜುಗಳ ಹಿತ ಕಾಯಬೇಕಾಗಿರುವುದು, ಸಾರ್ವಜನಿಕರ ಕರ್ತವ್ಯವೂ ಆಗಿದೆ ಎಂದು ಅವರು, ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುವ ಕಾರ್ಯಾಗಾರಗಳಿಗೆ ವರದಿಗಾರರ ಕೂಟ ಹಾಗೂ ತಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಜೈರಾಜ ಎಂ.ಚಿಕ್ಕಪಾಟೀಲ್ ಮಾತನಾಡಿ, ದೃಶ್ಯಕಲಾ ಮಹಾ ವಿದ್ಯಾಲಯದಲ್ಲಿ ಪ್ರಸ್ತುತ ಸಂದರ್ಭದಲ್ಲಿ ದಾಖಲಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರೇ ಅದೃಷ್ಟವಂತರು. ಈಗ ಕಾಲೇಜು 60ರ ಸಂಭ್ರಮದಲ್ಲಿದೆ. ಹಾಗಾಗಿ ನಿರಂತರ ಕಾರ್ಯಕ್ರಮ, ಕಲಾ ಚಟುವಟಿಕೆಗಳಾಗುತ್ತಿವೆ. ದೇಶ, ವಿದೇಶಗಳಲ್ಲಿ ನೆಲೆಸಿರುವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಒಡನಾಟವೂ ನಿಮಗೆ ಸ್ಫೂರ್ತಿಯಾಗಲಿದ್ದು, ನಿಮ್ಮಗಳ ಬದುಕು, ಭವಿಷ್ಯಕ್ಕೂ ಸರಿಯಾದ ಮಾರ್ಗದರ್ಶನ ಸಿಗಲು ಕಾಲೇಜಿನ ವಜ್ರ ಮಹೋತ್ಸವ ಕಾರಣವಾಗುತ್ತಿದೆ ಎಂದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ರಾಸೇಯೋ ಘಟಕ ಕಾರ್ಯಕ್ರಮಾಧಿಕಾರಿ ಡಾ.ಸತೀಶಕುಮಾರ.ಪಿ.ವಲ್ಲೇಪುರೆ ಮಾತನಾಡಿದರು.

ಸಂಘದ ಗೌರವ ಸಲಹೆಗಾರ್ತಿ ಕೀರ್ತನಾ ಅಲ್ಫೋನ್ಸಾ, ಅಧ್ಯಕ್ಷ ಟಿ.ವಿ,ದರ್ಶನ್, ಉಪಾಧ್ಯಕ್ಷ ಮಹಮ್ಮದ್ ಅಬ್ಬಾಸ್, ಬೋಧನಾ ಸಹಾಯಕರಾದ ಡಾ.ಸಂತೋಷಕುಮಾರ, ಕುಲಕರ್ಣಿ, ಡಾ.ಗಿರೀಶಕುಮಾರ, ದತ್ತಾತ್ರೇಯ ಭಟ್ಟ, ಶಿವಶಂಕರ ಸುತಾರ್, ಕೆ.ವಿ.ಪ್ರಮೋದ, ದರ್ಶನ್ ಚಕ್ರಸಾಲಿ, ರಂಗನಾಥ ಕುಲಕರ್ಣಿ, ಅರುಣ ಕಮ್ಮಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲಕರು ಇದ್ದರು.

ರಾಧಿಕಾ, ನವ್ಯಾ, ಕೀರ್ತಿ, ಗಿರೀಶ, ಭರತ್ ಆಚಾರಿ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದ ಸಲುವಾಗಿ ಫಿಲ್ಮ್ ಕಾನ್ಸೆಪ್ಟ್ ನಲ್ಲಿ ಸಿದ್ಧ ಪಡಿಸಿದ್ದ ಸಭಾಂಗಣ ವಿಶೇಷ ಗಮನ ಸೆಳೆಯಿತು.

2024-25ನೇ ಶೈಕ್ಷಣಿಕ ಸಾಲಿನಲ್ಲಿ ಈವರೆಗೆ ರಾಜ್ಯ-ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹೆಚ್ಚಿನ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಇದೇ ವೇಳೆ ಕನ್ನಡ ರಾಜ್ಯೋತ್ಸವದ ನಿಮಿತ್ತ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ, ಇತರೆ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ