ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಈಗ ಮಾಡಿರುವ ಆಸ್ತಿ ಸಮೀಕ್ಷೆ ತಾಂತ್ರಿಕವಾಗಿ ಸರಿಯಿಲ್ಲ. ಹೆಸ್ಕಾಂದಿಂದ ಮೀಟರ್ ನೀಡಿರುವ ಮನೆಗಳ ಸಂಖ್ಯೆಗೂ ಮತ್ತು ಪಾಲಿಕೆ ಆಸ್ತಿ ಸಂಖ್ಯೆಗೂ ವ್ಯತ್ಯಾಸವಿದೆ. ಈ ಕುರಿತು ಕ್ರಮವಹಿಸಿ, ಸಮನ್ವಯತೆ ಸಾಧಿಸಿ, ಪ್ರತಿ ಆಸ್ತಿಗೂ ಟ್ಯಾಕ್ಸ್ ಬರುವಂತೆ ಕ್ರಮವಹಿಸಲು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕರ ವಸೂಲಿಯಾಗಲಿ: ಕರ ವಸೂಲಾತಿ ಪ್ರಗತಿ ಆಗಬೇಕು. ಸುಮಾರು 45 ಸಾವಿರಕ್ಕೂ ಅಧಿಕವಾಗಿ ಅನಧಿಕೃತ ನಿವೇಶನಗಳು ನಿರ್ಮಾಣಗಳಾಗಿವೆ. ಇವುಗಳಿಂದ ನಾಗರಿಕ ಸವಲತ್ತು, ಮೂಲ ಸೌಕರ್ಯ ನೀಡಲು ಸಮಸ್ಯೆಗಳಾಗುತ್ತಿವೆ. ಈ ಬಗ್ಗೆ ಕ್ರಮವಹಿಸಬೇಕು. ಪ್ರತಿ ಆಸ್ತಿಯೂ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಬೇಕು. ಪ್ರತಿ ವಲಯದಲ್ಲಿ ಈ ಕುರಿತು ಅಭಿಯಾನ ಆಗಬೇಕು. ಕೃಷಿ ಭೂಮಿ ಸೈಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದು ಅನಧಿಕೃತ. ಇದನ್ನು ನಿಲ್ಲಿಸಲು ಗಂಭೀರವಾಗಿ ಪರಿಗಣಿಸಬೇಕು. ನೋಂದಣಿ ಇಲಾಖೆ, ಸರ್ವೇ ಇಲಾಖೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜಂಟಿಯಾಗಿ ಕ್ರಮವಹಿಸಬೇಕು. ಫಲವತ್ತಾದ ಕೃಷಿ ಭೂಮಿಯನ್ನು ಮನೆ ಕಟ್ಟಲು ಪ್ಲಾಟ್‌ಗಳನ್ನಾಗಿ ಪರಿವರ್ತಿಸಿ, ಮಾರುವುದು ಕಾನೂನುಬಾಹಿರ. ಈ ಸಂಗತಿಯು ಮುಂದಿನ ದಿನಮಾನಗಳಲ್ಲಿ ಅನೇಕ ರೀತಿಯಿಂದ ತೊಂದರೆ ಆಗಬಹುದು ಎಂದು ಸಚಿವರು ಹೇಳಿದರು.
ಅವಳಿ ನಗರದಲ್ಲಿ ಕುಡಿಯುವ ನೀರಿನ ಕರ ವಸೂಲಾತಿ ಸುಮಾರು ₹149 ಕೋಟಿಗಳ ಬಾಕಿಯಿದೆ. ಜನರಿಗೆ ಸರಿಯಾದ ಸಮಯಕ್ಕೆ ನಿಗದಿತ ದಿನಗಳಲ್ಲಿ ನೀರು ಸರಬರಾಜು ಮಾಡಬೇಕು. ಎಲ್ಲ ಬಾಕಿ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒನ್ ಟೈಮ್ ಸೆಟ್ಲಮೆಂಟ್ ಮಾಡಲು ಬಹಳಷ್ಟು ಶಾಸಕರು ಮತ್ತು ಅಧ್ಯಕ್ಷರು ಒತ್ತಡ ತರುತ್ತಿದ್ದಾರೆ. ಅವರು ಮನವಿ ಸಲ್ಲಿಸಿದ ನಂತರ ಸರ್ಕಾರದ ಗಮನಕ್ಕೆ ತರುತ್ತೇನೆ. ಬಾಕಿ ಮೊತ್ತದ ಬಡ್ಡಿ ಮನ್ನಾ ಮಾಡಲು ಸರ್ಕಾರಕ್ಕೆ ಒನ್ ಟೈಮ್ ಸೆಟ್ಲಮೆಂಟ್ ಆದೇಶಕ್ಕಾಗಿ ಪಾಲಿಕೆಯಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸಚಿವರು ತಿಳಿಸಿದರು.ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಬಡಾವಣೆ ನಿರ್ಮಾಣವಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು. ಈಗಾಗಲೇ ಅನುಮತಿ ಇಲ್ಲದೆ ನಿರ್ಮಿಸಿರುವ ಬಡಾವಣೆಗಳಿಗೆ ನೋಟಿಸ್ ನೀಡಿ, ಸೂಕ್ರ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶಿಸಿದರು.
ಹೆಸ್ಕಾಂ, ಪಾಲಿಕೆಯಿಂದ ಅಗತ್ಯ ಸೌಲಭ್ಯಗಳನ್ನು ಪಡೆದು ಪಾಲಿಕೆ ನಿಯಮಾನುಸಾರ ಕರ ತುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಕ್ರಿಯಾಶೀಲವಾಗಬೇಕು. ಮುಂದಿನ ದಿನಗಳಲ್ಲಿ ತಾವು ಈ ಕುರಿತು ಮಹಾನಗರಪಾಲಿಕೆಯಿಂದ ಸೂಕ್ತ ವರದಿ ಪಡೆದುಕೊಳ್ಳುವುದಾಗಿ ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಕೃಷಿ ಭೂಮಿಯನ್ನು ಅನುಮತಿ ಇಲ್ಲದೆ ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಅದನ್ನು ರದ್ದುಪಡಿಸಿ, ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಹುಡಾ ಮತ್ತು ಪಾಲಿಕೆ ಅಧಿಕಾರಿಗಳು ವರದಿ ಸಲ್ಲಿಸಿದರೆ ಕ್ರಮ ಜರುಗಿಸಲಾಗುತ್ತದೆ ಎಂದರು. ಜಿಲ್ಲೆಯಲ್ಲಿ ಅನಧಿಕೃತ ಲೇಔಟ್ ಆಗುವುದನ್ನು ನಿಯಂತ್ರಿಸಲು ಜಂಟಿ ಸಮಿತಿ ರಚಿಸಿ, ಕ್ರಮಕೈಗೊಳ್ಳಲಾಗುತ್ತದೆ ಎಂದು ಉತ್ತರಿಸಿದರು.ಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ, ಹುಡಾ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಬಿರಾದಾರ ಇದ್ದರು.