ಡ್ರೋನ್ ಸರ್ವೇ ಮೂಲಕ ಆಸ್ತಿ ಸಮೀಕ್ಷೆಯಲ್ಲಿ ಜಿಬಿಎ ಎಡವಟ್ಟು

KannadaprabhaNewsNetwork |  
Published : Sep 22, 2026, 04:15 AM IST
GBA

ಸಾರಾಂಶ

ಜಿಪಿಎಸ್ ಲೊಕೇಶನ್ ಆಧಾರಿತ, ಡ್ರೋನ್ ಸರ್ವೇ ಮೂಲಕ ಆಸ್ತಿಗಳ ಸರ್ವೇ ನಡೆಸುವಲ್ಲಿ ಜಿಬಿಎನಿಂದ ಭಾರಿ ಎಡವಟ್ಟು ಆಗುತ್ತಿದ್ದು, ಆಸ್ತಿಗಳ ಅಳತೆಯನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಿ ದುಪ್ಪಟ್ಟು ತೆರಿಗೆ ವಿಧಿಸಿ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗುತ್ತಿದೆ.

 ಬೆಂಗಳೂರು : ಜಿಪಿಎಸ್ ಲೊಕೇಶನ್ ಆಧಾರಿತ, ಡ್ರೋನ್ ಸರ್ವೇ ಮೂಲಕ ಆಸ್ತಿಗಳ ಸರ್ವೇ ನಡೆಸುವಲ್ಲಿ ಜಿಬಿಎನಿಂದ ಭಾರಿ ಎಡವಟ್ಟು ಆಗುತ್ತಿದ್ದು, ಆಸ್ತಿಗಳ ಅಳತೆಯನ್ನು ಬೇಕಾಬಿಟ್ಟಿ ಹೆಚ್ಚಳ ಮಾಡಿ ದುಪ್ಪಟ್ಟು ತೆರಿಗೆ ವಿಧಿಸಿ ಪಾವತಿಸುವಂತೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಲಾಗುತ್ತಿದೆ.

ತಮ್ಮಿಂದಲೇ ಆಗಿರುವ ತಪ್ಪನ್ನು ಸರಿಪಡಿಸಿಕೊಡಿ ಎಂದು ಸ್ವತ್ತುಗಳ ಮಾಲೀಕರು ಮನವಿ ಮಾಡಲು ಹೋದರೆ, ಅರ್ಧದಷ್ಟು ತೆರಿಗೆಯನ್ನು ಪಾವತಿಸಿ ನಂತರ ಆನ್‌ಲೈನ್ ಮೂಲಕವೇ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ. ತಮ್ಮದಲ್ಲದೇ ತಪ್ಪಿಗೆ ನೋಟಿಸ್ ಸ್ವೀಕರಿಸುವ ಸ್ವತ್ತುಗಳ ಮಾಲೀಕರು ನಿತ್ಯ ಜಿಬಿಎ ಕಚೇರಿ, ಉನ್ನತ ಅಧಿಕಾರಿಗಳ ಕಚೇರಿಗೆ ಅಲೆಯುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ಆಸಕ್ತಿ ತೋರಿಸದ ಕಂದಾಯ ಅಧಿಕಾರಿಗಳು, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಎಂದು ಹೇಳಿ ನಾಗರಿಕರನ್ನು ಸಾಗ ಹಾಕುತ್ತಿದ್ದಾರೆ.

ನಗರದ ರಘುವನಹಳ್ಳಿ ನಿವಾಸಿಯಾಗಿರುವ ಎ.ಎನ್.ಅನಂತಮೂರ್ತಿ ಅವರ ಮನೆಯ ಒಟ್ಟಾರೆ ವಿಸ್ತೀರ್ಣ ಸುಮಾರು 2,500 ಚದರಡಿ ಇದೆ. ಆದರೆ, ಇತ್ತೀಚೆಗೆ ಜಿಬಿಎನ ಕಂದಾಯ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, ಮನೆಯ ಒಟ್ಟಾರೆ ವಿಸ್ತೀರ್ಣ 4,436 ಚದರಡಿ ಎಂದು ನಮೂದಿಸಲಾಗಿದೆ. ಅಲ್ಲದೇ ಆಸ್ತಿ ತೆರಿಗೆಯನ್ನು ವಾರ್ಷಿಕ 11,439 ರು.ನಿಂದ 20,298 ರು.ವರೆಗೆ ಏರಿಸಲಾಗಿದೆ.

ಅರ್ಧ ಕಟ್ಟಿ ಮೇಲ್ಮನವಿ ಸಲ್ಲಿಸಿ: 

ಲೋಪದೋಷದಿಂದ ಕೂಡಿರುವ ಆಸ್ತಿ ಮೌಲ್ಯಮಾಪನವನ್ನು ಪ್ರಶ್ನಿಸಿ ಕೆಂಗೇರಿ ಕಂದಾಯ ಕಚೇರಿಗೆ ಮನವಿ ಪತ್ರ ಸಲ್ಲಿಸಿದರೆ ಅಧಿಕಾರಿಗಳು, ಅರ್ಧ ತೆರಿಗೆ ಪಾವತಿಸಿ ಮೇಲ್ಮನವಿ ಸಲ್ಲಿಸಬೇಕು ಎನ್ನುತ್ತಿದ್ದಾರೆ. ಇನ್ನು ಡಿ.ಡಿ ಮೂಲಕ ಅರ್ಧದಷ್ಟು ತೆರಿಗೆ ಪಾವತಿಸಲು ಸಿದ್ದವಿದ್ದರೂ, ಸರಿಯಾದ ಮಾರ್ಗದರ್ಶನವನ್ನು ಮಾಡುತ್ತಿಲ್ಲ. ಕಚೇರಿಯಿಂದ ಕಚೇರಿಗೆ ಅಲೆದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅನಂತಮೂರ್ತಿ ದೂರಿದರು.

ಬೇರೆ ಆಸ್ತಿಯ ಫೋಟೋ: 

ಪಾಲಿಕೆಯ ಕಂದಾಯ ಇಲಾಖೆಯ ಜಿಪಿಎಸ್ ಆಧಾರಿತ ಸರ್ವೇ ಚಿತ್ರಗಳನ್ನು ಗಮನಿಸಿದರೆ ಅದು ಹಲವು ವರ್ಷಗಳ ಹಿಂದೆ ತೆಗೆದಿರುವ ಫೋಟೋ ಎನ್ನುವುದು ಸ್ಪಷ್ಟವಾಗುತ್ತದೆ. ಅಲ್ಲದೇ, ನಮ್ಮ ಮನೆಯ ಫೋಟೋ ಬದಲು ನೆರೆ ಮನೆಯ ಫೋಟೋ ಆಧರಿಸಿ ನನಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಲ್ಲಿ ನೀಡಿರುವ ಏರಿಯಲ್ ಫೋಟೋ ನಮ್ಮ ಮನೆಯದ್ದಲ್ಲ ಎಂದು ಅನಂತಮೂರ್ತಿ ತಿಳಿಸಿದರು.

ನಮ್ಮದಲ್ಲದ ತಪ್ಪಿಗೆ 2021-22ರಿಂದ 2025-26ರ ವರೆಗಿನ ವಾರ್ಷಿಕ ಆಸ್ತಿ ತೆರಿಗೆಯನ್ನು ಹೆಚ್ಚಿಸಿ ಬಡ್ಡಿಯನ್ನು ವಿಧಿಸಿ 92,105 ರು. ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಈ ರೀತಿ ನಗರದ ಅನೇಕ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಪಾಲಿಕೆಯ ಅಧಿಕಾರಿಗಳು ಡಿಜಿಟಲ್ ಮಾಹಿತಿಯ ಜೊತೆಗೆ ಸ್ವತ್ತುಗಳಿಗೆ ಭೇಟಿ ನೀಡಿ ಅಳತೆ ಮಾಡಿ ತೆರಿಗೆ ನಿಗದಿಪಡಿಸಬೇಕು. ಕೇವಲ ಜಿಪಿಎಸ್‌, ಡ್ರೋನ್ ಸರ್ವೇ ಆಧರಿಸಿ ಆಸ್ತಿಗಳ ವಿಸ್ತೀರ್ಣ ನಿಗದಿಪಡಿಸಿದರೆ ಇಂತಹ ಎಡವಟ್ಟುಗಳು ಆಗುತ್ತವೆ. ನಾಗರಿಕರು ಅನಗತ್ಯವಾಗಿ ಕಚೇರಿಗೆ ಅಲೆಯಬೇಕಾಗುತ್ತದೆ ಎಂದು ಅನಂತಮೂರ್ತಿ ಬೇಸರ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ರೆ ರಾಜ್ಯಾದ್ಯಂತ ಹೋರಾಟ
ಸದೃಢ ದೇಶ ನಿರ್ಮಾಣಕ್ಕಾಗಿ ಯುವಪೀಳಿಗೆ ಕ್ರೀಡೆಯಲ್ಲಿ ಭಾಗವಹಿಸಿ