ಆಸ್ತಿ ತೆರಿಗೆ ಸಂಗ್ರಹ ಲೋಪ:ಅಧಿಕಾರಿಗಳ ವಿರುದ್ಧ ತನಿಖೆ

KannadaprabhaNewsNetwork |  
Published : Feb 03, 2024, 01:47 AM IST
ಕನ್ನಡಪ್ರಭ | Kannada Prabha

ಸಾರಾಂಶ

ಆಸ್ತಿ ತೆರಿಗೆ ಸಂಗ್ರಹಕ್ಕೆ ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದು, 6 ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಲೋಪ ಎಸಗಿದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಅಜಿತ್‌ ಶೋಕಾಸ್‌ ನೋಟಿಸ್‌ ಹಾಗೂ ವಲಯದ ಕಂದಾಯ ವಿಭಾಗದ ಉಪ ಆಯುಕ್ತ ಡಿ.ಕೆ.ಬಾಬು ಅವರ ವಿರುದ್ಧ ಇಲಾಖಾ ತನಿಖೆಗೆ ಕಂದಾಯ ವಿಭಾಗದ ವಿಶೇಷ ಆಯುಕ್ತರು ಶಿಫಾರಸು ಮಾಡಿದ್ದಾರೆ.

ಜತೆಗೆ ಬೊಮ್ಮನಹಳ್ಳಿ ವಲಯದ ಆರು ಸಹಾಯಕ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹಾಗೂ ಇಬ್ಬರು ಕಂದಾಯ ಅಧಿಕಾರಿಗಳ ವಿರುದ್ಧವೂ ಇಲಾಖೆ ತನಿಖೆಗೆ ಶಿಫಾರಸು ಮಾಡಲಾಗಿದೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚನೆ ನೀಡಿತ್ತು. ಆದರೆ, ಈ ಕಾರ್ಯ ನಡೆಸದಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಶೋಕಾಸ್‌ ನೋಟಿಸ್‌ ಮತ್ತು ಇಲಾಖೆ ವಿಚಾರಣೆಗೆ ವಿಶೇಷ ಆಯುಕ್ತ ಮುನೀಷ್‌ ಮುದ್ಗಿಲ್‌ ಅವರು ಮುಖ್ಯ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌, ಕಂದಾಯ ವಿಶೇಷ ಆಯುಕ್ತರ ವರದಿ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಜಂಟಿ ಆಯುಕ್ತರಿಗೆ ಶೋಕಾಸ್‌ ನೋಟಿಸ್‌ ನೀಡಲಾಗಿದ್ದು, ಬೊಮ್ಮನಹಳ್ಳಿ ವಲಯದ ಕಂದಾಯ ವಿಭಾಗದ ಉಪ ಆಯುಕ್ತರ ವಿರುದ್ಧ ಇಲಾಖೆ ತನಿಖೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಕರಣದ ಗಂಭೀರತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಉತ್ತರ ಪಡೆದು ಅಮಾನತುಗೊಳಿಸಬೇಕಾ ಅಥವಾ ವಿಚಾರಣೆ ನಡೆಸಬೇಕಾ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಜ.1ರಂದೇ ಪ್ರಕಟಿಸಿದ್ದ ಕನ್ನಡಪ್ರಭ: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಸೀಜ್‌ ಮಾಡದ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಕನ್ನಡಪ್ರಭ ಜ.1 ರಂದೇ ವಿಶೇಷ ವರದಿ ಪ್ರಕಟಿಸಿತ್ತು.

ಇದೀಗ ಜಂಟಿ ಆಯುಕ್ತ, ಉಪ ಆಯುಕ್ತ ಸೇರಿದಂತೆ ಹಲವು ಅಧಿಕಾರಿಗಳಿಗೆ ಇಲಾಖೆ ತನಿಖೆ, ಅಮಾನತು ಶಿಕ್ಷೆಗೆ ಒಳಪಡಿಸಲಾಗುತ್ತಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ