ಆಸ್ತಿ ತೆರಿಗೆ ಹೆಚ್ಚಳ, ಫುಟ್‌ಪಾತ್ ಒತ್ತುವರಿ ತೆರವಿಗೆ ತೀರ್ಮಾನ

KannadaprabhaNewsNetwork |  
Published : Feb 06, 2025, 12:18 AM IST
5ಕೆಆರ್ ಎಂಎನ್ 7.ಜೆಪಿಜಿಬಿಡದಿ ಪುರಸಭೆ ಸಭಾಂಗಣದಲ್ಲಿ ಸ್ತಾಯಿ ಸಮಿತಿ ಅಧ್ಯಕ್ಷ ಲೋಹಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ಬಿಡದಿ ಪುರಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಶೇ. 4ರಷ್ಟು ಆಸ್ತಿ ತೆರಿಗೆ ಹೆಚ್ಚಳ, ಫುಟ್ ಪಾತ್ ಒತ್ತುವರಿ ತೆರವು, ಎಲ್ಇಡಿ ದೀಪ ಅಳವಡಿಕೆ, ಯುಜಿಡಿ ಮತ್ತು ನೀರು ಸರಬರಾಜು ಕಾಮಗಾರಿ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.

ಕನ್ನಡಪ್ರಭ ವಾರ್ತೆ ರಾಮನಗರಬಿಡದಿ ಪುರಸಭೆ ವ್ಯಾಪ್ತಿಯ ಸ್ವತ್ತುಗಳಿಗೆ ಶೇ. 4ರಷ್ಟು ಆಸ್ತಿ ತೆರಿಗೆ ಹೆಚ್ಚಳ, ಫುಟ್ ಪಾತ್ ಒತ್ತುವರಿ ತೆರವು, ಎಲ್ಇಡಿ ದೀಪ ಅಳವಡಿಕೆ, ಯುಜಿಡಿ ಮತ್ತು ನೀರು ಸರಬರಾಜು ಕಾಮಗಾರಿ ಕೈಗೊಳ್ಳುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಿತು.ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸದಸ್ಯರು ಆಸ್ತಿ ತೆರಿಗೆ ಹೆಚ್ಚಳ ಹಾಗೂ ಫುಟ್ ಪಾತ್ ಒತ್ತುವರಿ ತೆರುವಿನ ಬಗ್ಗೆ ಸುಧೀರ್ಘವಾಗಿ ಚರ್ಚಿಸಿದರು.ಸದಸ್ಯ ದೇವರಾಜು ಮಾತನಾಡಿ, 8ನೇ ವಾರ್ಡಿನಲ್ಲಿ ಡ್ರೈನೇಜ್ ಮಾಡಿದ್ದು ಅದರ ಹಿಂದೆ ವ್ಯಾಪಾರ ಮಾಡಲಿ ತಕರಾರಿಲ್ಲ. ಆದರೆ ರಸ್ತೆಯಂಚನ್ನು ಅಂಗಡಿಗಾಗಿ ಒತ್ತುವರಿ ಮಾಡಿದರೆ ಸಾರ್ವಜನಿಕರಿಗೆ ಬಹಳ ತೊಂದರೆಯಾಗಲಿದೆ ಎಂದು ಸಭೆ ಗಮನ ಸೆಳದರು. ಆಗ ಸದಸ್ಯ ಸಿ.ಉಮೇಶ್ ಪ್ರತಿಕ್ರಿಯಿಸಿ, ಬಿಡದಿ ಪೊಲೀಸ್ ಠಾಣೆಯಿಂದ ಒತ್ತುವರಿ ಜಾಗವನ್ನು ಮೊದಲು ತೆರವು ಮಾಡಿ, ನಂತರ ಬೀದಿ ವ್ಯಾಪಾರಿಗಳನ್ನು ತೆರವು ಮಾಡಬೇಕು. ಬಿಜಿಎಸ್ ವೃತ್ತದಿಂದ ಸಿಲ್ಕ್ ಫಾರ್ಮ್ ಹಾಗೂ ಬಿಜಿಎಸ್ ವೃತ್ತದಿಂದ ತಿಮ್ಮಪ್ಪನಕೆರೆವೆಗೂ ರಸ್ತೆ ಒತ್ತುವರಿ ಆಗಿದೆ. ಹೊಸ ಪುರಸಭಾ ಕಚೇರಿ ಮುಂಭಾಗ ಯಾವುದೇ ವಹಿವಾಟು ನಡೆಸುವ ಮಳಿಗೆ ಇಡದಂತೆ ಕ್ರಮ ವಹಿಸಬೇಕು ಎಂದರು.ಸದಸ್ಯ ಸಿ.ಉಮೇಶ್ ಮಾತನಾಡಿ, ಪುರಸಭೆ ಆಸ್ತಿಗಳ ಸ್ಲಾಬ್ ನೀಡಿ ಸರ್ಕಾರದ ನಿಯಮಾವಳಿಯಂತೆ ತೆರಿಗೆ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ನಾಗರಿಕರಿಗೆ ಹೆಚ್ಚು ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದರು.3 ವರ್ಷದ ಹಿಂದೆ ಆಸ್ತಿ ತೆರಿಗೆಯನ್ನು ಶೇ.3ರಷ್ಟು ಹೆಚ್ಚಳ ಮಾಡಲಾಗಿತ್ತು. ಹಾಗಾಗಿ ಸಾರ್ವಜನಿಕರಿಗೆ ಹೊರೆ ಆಗದಂತೆ ಸಾಧಕ, ಭಾದಕ ಚರ್ಚಿಸಿ ಅಂತಿಮವಾಗಿ 2025-26ನೇ ಸಾಲಿಗೆ ಶೇ.4 ಹೆಚ್ಚಳ ಮಾಡಲು ಸಭೆ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು. ಡಾಂಬರೀಕರಣ ಮಾಡಲು ಪುಟ್ಟಮ್ಮ ಸರ್ಕಲ್‌ನಿಂದ ರೆಡ್ಡಿ ಮನೆ ಮೂಲಕ ಮೀನಿನ ಅಂಗಡಿವರೆಗೆ ₹30 ಲಕ್ಷ, ಬರ್ಡ್ ಸರ್ಕಲ್‌ನಿಂದ ರೆಡ್ಡಿ ಮನೆವರೆಗೆ ₹30 ಲಕ್ಷದಂತೆ 2 ಟೆಂಡರ್ ಕರೆದು ಕೆಲಸ ನಿರ್ವಹಿಸಿ ಎಂಬ ಚರ್ಚೆ ನಡೆಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎಸ್.ಲೋಹಿತ್ ಕುಮಾರ್ ಮಾತನಾಡಿ, ಪುರಸಭೆ ವ್ಯಾಪ್ತಿಯ ಮೀನಿನ ಅಂಗಡಿಯಿಂದ ಕೇತಿಗಾನಹಳ್ಳಿವರೆಗೆ ಮೊದಲ ಹಂತದಲ್ಲಿ ಮೋರಿಯಿಂದ ಮುಂದೆ ಬಂದಿರುವ ಅಂಗಡಿ ತೆರವು ಮಾಡಲಾಗುವುದು. ಜನಸಂದಣಿ ಪ್ರದೇಶದ ರಸ್ತೆಯಲ್ಲಿ ಅತಿಕ್ರಮ ಪ್ರವೇಶ ಮಾಡಿರುವ ಮಾಲೀಕರೆ ಅಂಗಡಿ ತೆರವು ಮಾಡಿಕೊಳ್ಳುವಂತೆ ಪ್ರಕಟಣೆ ಹೊರಡಿಸಿ, ಇಲ್ಲದಿದ್ದಲ್ಲಿ ಪುರಸಭೆಯಿಂದ ತೆರವು ಮಾಡಲು ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ಈ ವಿಷಯವನ್ನು ಸಾಮಾನ್ಯ ಸಭೆಗೆ ತಂದು ಒಪ್ಪಿಗೆ ಪಡೆದು ಕ್ರಮ ವಹಿಸಲಾಗುವುದು ಎಂದರು.ಸಿ.ಉಮೇಶ್, ಸೋಮಶೇಖರ್, ನವೀನ್ ಕುಮಾರ್, ದೇವರಾಜು, ಮುಖ್ಯಾಧಿಕಾರಿ ರಮೇಶ್, ರೂಪಾ, ಶಿಲ್ಪಾ, ಪವಿತ್ರ, ನಟರಾಜು, ಶ್ಯಾಮ್, ನಂಜುಂಡಸ್ವಾಮಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!