ಸೊರಬ: ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಮತ್ತು ವಿವಿಧ ಧರ್ಮಿಯರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಸ್ನೇಹ ಪೂರಿತ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಸೆ.೩ರಿಂದ ೧೪ ರವರಗೆ ತಾಲೂಕಿನ ಉಳವಿ ಗ್ರಾಮದಲ್ಲಿ ಮುಹಮ್ಮದ್ ಪೈಗಂಬರ್ ಅವರ ಸೀರತ್ (ಚರಿತ್ರೆ) ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕದ ತಾಲೂಕು ಶಾಖೆ ಅಧ್ಯಕ್ಷ ಇನಾಯತ್ ಉಲ್ಲಾ ಸಾಬ್ ತಿಳಿಸಿದರು.ಪಟ್ಟಣದ ಮಾರ್ಕೆಟ್ ರಸ್ತೆಯ ದಾರುಸ್ಸಲಾಂ ಶಾದೀಮಹಲ್‌ನಲ್ಲಿ ಸೀರತ್ ಅಭಿಯಾನ ಕುರಿತು ಕರೆಯಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನ್ಯಾಯದ ಹರಿಕಾರ ಮುಹಮ್ಮದ್ ಪೈಗಂಬರ್ ಸರ್ವ ಕಾಲಿಕ ಬೋಧನೆಗಳನ್ನು ಜನತೆಗೆ ತಿಳಿಸುವುದು ಪ್ರವಾದಿ ಮುಹಮ್ಮದ್‌ರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಸೇರಿದಂತೆ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ಸೆ.೧೪ ರಂದು ಶಾದಿ ಮಹಲ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.ಅಭಿಯಾನದ ಅಂಗವಾಗಿ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಹಾಗೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉಳವಿ ಗ್ರಾಮಸ್ಥರ ಜೊತೆ ಸಭೆ ಹಾಗೂ ಸಮಾಜ ಭಾಂದವರೊಂದಿಗೆ ವೈಯಕ್ತಿಕ ಭೇಟಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಹಾಗೂ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಹಾಯ ಹಸ್ತ ನೀಡುವ ಉದ್ದೇಶ ಹೊಂದಲಾಗಿದೆ. ಪ್ರವಾದಿ ಮುಹಮ್ಮದ್‌ರ ಜೀವನ ಚರಿತ್ರೆ ಕುರಿತ ಪುಸ್ತಕದ ೫೦ ಸೆಟ್ ಹಾಗೂ ೫೦೦ ಪೋಲ್ಡರ್ಸ್ ಹಂಚಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಹೀರುದ್ದೀನ್, ಮುಹಮ್ಮದ್ ಇಂತಿಯಾಜ್, ಅಬ್ದುಲ್ ರಶೀದ್ ಸಾಬ್, ಮುಹಮ್ಮದ್ ಶಹಾಬುದ್ದೀನ್, ಎಲ್.ಸಿ.ಅನ್ವರ್ ಸಾಬ್, ಅಬ್ದುಲ್ ರಹೀಂ ಸಾಬ್, ಜೈನುಲ್ಲಾಬುದ್ಧಿನ್, ಮಹಮದ್ ಮುಜಾಮಿಲ್ ಮೊದಲಾದವರಿದ್ದರು.