ಚನ್ನಪಟ್ಟಣ: ಕ್ಷೇತ್ರದಲ್ಲಿ ಬಾಕಿ ಇರುವ ಕಾಮಗಾರಿಗಳ ಪಟ್ಟಿ ಮಾಡುತ್ತಿದ್ದು ಈಗಾಗಲೆ ೨೦೦ ಕೋಟಿ ರುಪಾಯಿ ವೆಚ್ಚದ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ತಾಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಸರ್ಕಾರದ ಎಲ್ಲಾ ಯೋಜನೆಗಳು ಗ್ರಾಮ ಪಂಚಾಯತಿ ಆಡಳಿತದ ಮೂಲಕವೇ ಜಾರಿಯಾಗುತ್ತಿದ್ದು ಗ್ರಾಪಂಗಳಿಗೆ ತನ್ನದೇ ಆದ ಮಹತ್ವ ಇದೆ. ಈ ನಿಟ್ಟಿನಲ್ಲಿ, ಗ್ರಾಪಂ ಸದಸ್ಯರು ಪ್ರಾಮಾಣಿಕವಾಗಿ ಶ್ರಮಿಸಿದರೆ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ಗ್ರಾಮ ಪಂಚಾಯಿತಿ ಸದಸ್ಯರು ೫ ವರ್ಷದ ಅಧಿಕಾರದ ಅವಧಿಯಲ್ಲಿ ಈ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣದ ಮೂಲಕ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಶ್ರಮಿಸಿದ್ದಾರೆ. ಗ್ರಾಪಂನ ಕಾಂಪೌಂಡ್ ನಿರ್ಮಾಣ ಹಾಗೂ ಒಳಾಂಗಣದ ಡಿಸೈನ್‌ಗೆ ತಾಪಂನಿಂದ ಬರುವ ಅನುದಾನ ಬಳಸಿ ಹೆಚ್ಚುವರಿ ಅನುದಾನವನ್ನು ನಾನು ನೀಡುತ್ತೇನೆ ಎಂದು ತಾಪಂ ಇಒರಿಗೆ ಸೂಚನೆ ನೀಡಿದ ಸಿ.ಪಿ.ಯೋಗೇಶ್ವರ್ ತಾಲೂಕಿನಲ್ಲಿನ ಪಿಡಿಒಗಳಿಗೆ ಚುರುಕು ಮುಟ್ಟಿಸಿ ಕೆಲಸ ಮಾಡಿಸಲು ತಾಲೂಕು ಪಂಚಾಯತಿ ಇಒ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ. ರೈತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಾಕಿ ಇರುವ ಪೈಪ್‌ಲೈನ್ ಕಾಮಗಾರಿಗಳು, ರಸ್ತೆ, ಚರಂಡಿಗಳ ಪಟ್ಟಿ ಮಾಡಿದ್ದು ೨೦೦ ಕೋಟಿ ರೂ. ಅನುದಾನದ ಕ್ರಿಯಾಯೋಜನೆಯನ್ನು ತಯಾರಿಸಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಆರ್‌ಎಸ್‌ನಲ್ಲಿ ೧೨೪ ಅಡಿ ನೀರು ಇದೆ. ತಾಲೂಕಿನ ಪ್ರತಿ ಕೆರೆಗಳಿಗೆ ಬೇಸಿಗೆಯಲ್ಲೂ ಎರಡು ಬಾರಿ ನೀರನ್ನು ತುಂಬಿಸಿ ಅಂತರ್ಜಲ ಹೆಚ್ಚಳ ಮಾಡಬಹುದು. ಈ ನಿಟ್ಟಿನಲ್ಲಿ ಸಣ್ಣ ಕೆರೆಗಳಿಗೂ ನೀರನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.೩೨ ಪಿಎಸಿಎಸ್ ನಿರ್ಮಾಣ: ತಾಲೂಕಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ಒಂದು ಪಿಎಸಿಎಸ್‌ಗಳನ್ನು ನಿರ್ಮಾಣ ಮಾಡಲು ಸರ್ಕಾರದ ಆದೇಶವಾಗಿದೆ. ಇದರಿಂದ ಗ್ರಾಪಂ ವ್ಯಾಪ್ತಿಯ ಹೈನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ೨ ಹಸುಗೆ ೧.೮೦ ಲಕ್ಷ ರೂ. ಸಾಲ ಸೌಲಭ್ಯ ನೀಡುತ್ತಿದೆ ಎಂದರು. .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಸಿ.ಎನ್. ಗೀತಾಶಿವಕುಮಾರ್ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಬಿ. ವೆಂಕಟೇಶ್, ಸದಸ್ಯರಾದ ಅಂದಾನಯ್ಯ, ಶಿವರಾಮು, ಟಿ.ಎನ್. ಭುವನೇಶ್ವರಿ, ರಮ್ಯ, ಬಿ.ಆರ್. ಮಂಜುಳ, ಕೆ.ಎ. ಗೀತಾ, ಪ್ರಸನ್ನ, ವೆಂಕಟಗಿರಿ, ಆರ್. ಸುಧಾ, ಎಂ. ನೇತ್ರಾ, ಮಹಾಲಿಂಗು ಇತರರು ಇದ್ದರು.ಬಾಕ್ಸ್..................
ನೀರಾ ಉತ್ಪಾದಕರ ಸಹಕಾರ ಸಂಘ ಸ್ಥಾಪನೆಚನ್ನಪಟ್ಟಣ ತಾಲೂಕಿನಲ್ಲಿ ನೀರಾ ಚಳವಳಿ ಆದ ವೇಳೆ ಮೂವರು ರೈತರು ಹುತಾತ್ಮರಾದರು. ಆದರೆ ಆ ಚಳವಳಿಯಿಂದ ಕೆಲವರಿಗೆ ರಾಜಕೀಯ ಲಾಭ ಆಯಿತೇ ಹೊರತುಮ ರೈತರಿಗೆ ಯಾವುದೇ ಅನುಕೂಲ ಆಗಿರಲಿಲ್ಲ ಎಂದು ಶಾಸಕ ಯೋಗೇಶ್ವರ್ ಹೇಳಿದರು.ತಾಲೂಕಿನಲ್ಲಿ ನೀರಾವರಿ ಅಭಿವೃದ್ಧಿಯಿಂದ ಹೈನೋದ್ಯಮ ಉತ್ತಮವಾಗಿದ್ದು, ನಿತ್ಯ ೩ ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಅದೇ ನಿಟ್ಟಿನಲ್ಲಿ ತೆಂಗಿನ ಬೆಳೆಗೂ ನೀರಾವರಿ ಪೂರಕ ಆಗಿದ್ದರೂ ಸಹ ತೆಂಗಿನ ಕಾಯಿ ಕಚ್ಚುತ್ತಿಲ್ಲ. ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿ ಆಗುವ ನಿಟ್ಟಿನಲ್ಲಿ ನೀರಾವನ್ನು ವಾಣಿಜ್ಯ ಪಾನೀಯ ಮಾಡಲು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ರೈತರಿಗೆ ನೀರಾ ಉತ್ಪಾದನೆಯ ತರಬೇತಿ ನೀಡಲಾಗುತ್ತಿದೆ. ನೀರಾ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ನೀಡಲು ಚಿಂತನೆ ಮಾಡಿ ಪ್ರತಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ನೀರಾ ಉತ್ಪಾದಕರ ಸಹಕಾರ ಸಂಘ ಸ್ಥಾಪನೆ ಮಾಡುವ ಗುರಿಹೊಂದಿದ್ದೇವೆ ಎಂದು ತಿಳಿಸಿದರು.
ಪೊಟೋ೧೧ಸಿಪಿಟಿ೧:ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಯೋಗೇಶ್ವರ್ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸಿ.ಎನ್. ಗೀತಾಶಿವಕುಮಾರ್, ಉಪಾಧ್ಯಕ್ಷ ಬಿ. ವೆಂಕಟೇಶ್, ಸದಸ್ಯರಾದ ಅಂದಾನಯ್ಯ, ಶಿವರಾಮು, ಟಿ.ಎನ್. ಭುವನೇಶ್ವರಿ ಇತರರಿದ್ದರು.