ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮ ಉದ್ಘಾಟನೆ
ಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಅಗತ್ಯದ ಜೊತೆ ವಿವಿಧ ಕ್ರೀಡೆಗಳನ್ನು ಅಭ್ಯಾಸ ಮಾಡಲು ರಾಜ್ಯ ಸರ್ಕಾರಕ್ಕೆ ₹5 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಮಾಹಿತಿ ನೀಡಿದರು.
ಶನಿವಾರ ಕಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಇದೇ ಶಾಲೆ, ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ ಇಲ್ಲೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಾಡಿದ್ದೇನೆ. ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫು ಎಂಬುದು ಸತ್ಯ. ಆದರೆ ಮೊಬೈಲ್ ಗೀಳು ಬಿಟ್ಟು ಕಠಿಣ ಶ್ರಮದಿಂದ ಅಭ್ಯಾಸ ಮಾಡಿ ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ಕವಿಮಾತು ಹೇಳಿದರು.ಪುಸ್ತಕಗಳ ಜೊತೆ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಕೂಡ ಮೈಗೂಡಿಸಿಕೊಳ್ಳಬೇಕು. ಪಿಯುಸಿ ನಂತರ ಭವಿಷ್ಯವನ್ನು ನಿರ್ಧರಿಸುವ ದಿನಗಳು ನಿಮ್ಮ ಎದುರಿಗೆ ಬರುತ್ತವೆ. ಓದಲು ಇರುವ ದಿನಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಗುರಿ ತಲುಪಬೇಕು ಎಂದರು.
₹ 1.75 ಕೋಟಿ ಮತ್ತು ₹ 1.25 ಕೋಟಿ ವೆಚ್ಚದಲ್ಲಿ ತಲಾ ಎರಡು ಕೊಠಡಿಗಳ ನಿರ್ಮಾಣ ಆಗಿವೆ. ಶೀಘ್ರದಲ್ಲೇ ಹೈಟೆಕ್ ಶೌಚಾಲಯ ನಿರ್ಮಾಣ ಮತ್ತು ಕಾಲೇಜಿನ ಪ್ರಾಂಗಣಕ್ಕೆ ಸಿಸಿ ರಸ್ತೆ ಅಥವಾ ಪಾರ್ಕಿಗೆ ಟೈಲ್ಸ್ ಹಾಕಿಸಿ ಕೊಡುವುದಾಗಿ ತಿಳಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಪಾಠಗಳನ್ನು ಆರಂಭಿಸಲಾಗಿದೆ ಎಂದರು.
ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ. 1972ರಿಂದ ಆರಂಭಗೊಂಡ ಈ ಕಾಲೇಜಿಗೆ ಹಿಂದೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನಾನು ಕೂಡ ಈ ಶಾಲೆ ವಿದ್ಯಾರ್ಥಿಯಾಗಿದ್ದು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನಮ್ಮ ಕಾಲೇಜಿನಲ್ಲಿ ದೊರೆಯುತ್ತಿದೆ. ಪೋಷಕರು ತಮ್ಮ ಮಕ್ಕಳು ನಮ್ಮಂತೆ ಆಗಬಾರದೆಂದು ಕಷ್ಟಪಟ್ಟು ಓದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತು ಪಾಠಗಳ ಕುರಿತು ಚರ್ಚಿಸುವುದು ಒಳಿತು ಎಂದು ಸಲಹೆ ಮಾಡಿದರು.
ಗೌರವ ಸ್ವೀಕರಿಸಿದ ಅಂತಾರಾಷ್ಟ್ರೀಯ ಜಿಮ್ ಪಟು ಚೇತನ್ ಕೊಡಪ್ಪ ಮಾತನಾಡಿ, ನಾನು ಓದಿದ ಶಾಲೆಯಲ್ಲಿ ನನ್ನ ಸಾಧನೆಗೆ ಗೌರವ ನೀಡುತ್ತಿರುವುದು ನನಗೆ ಹೃದಯ ತುಂಬಿ ಬರುತ್ತಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧಿಸಬೇಕು ಎಂದರು.
ಪುರಸಭೆ ಆರೋಗ್ಯಾಧಿಕಾರಿ ಶ್ರೀನಿವಾಸಮೂರ್ತಿ, ಮುಖಂಡ ರವಿ, ಜಿಮ್ ಚೇತನ್, ಉಪನ್ಯಾಸಕ ಲೋಕೇಶ್, ಚಂದ್ರಪ್ಪ, ರಾಜಣ್ಮ, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು. 11ಕೆಕೆಡಿಯು1.
11ಕೆಕೆಡಿಯು1ಎ..