ಕನ್ನಡಪ್ರಭ ವಾರ್ತೆ ಮಂಡ್ಯ
ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮುಡಾ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಧಿಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಭೂಮಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಬಡಾವಣೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಸರ್ಕಾರಿ ಜಮೀನುಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.
ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್ ಅವರ ಸಲಹೆ-ಮಾರ್ಗದರ್ಶನವನ್ನು ಪಡೆದು ಪೌರಾಡಳಿತ ಸಚಿವ ಭೈರತಿ ಸುರೇಶ್ ಅವರನ್ನು ಭೇಟಿಯಾಗಿ ಬಡಾವಣೆಯ ಅಭಿವೃದ್ಧಿಗೆ ನೆರವಾಗುವಂತೆ ಕೋರಲಾಗುವುದು ಎಂದು ನುಡಿದರು.ಪ್ರಾಧಿಕಾರದಿಂದ ೧೯೮೮ರಲ್ಲಿ ಸಾಹುಕಾರ್ ಚನ್ನಯ್ಯ ಬಡಾವಣೆ, ೧೯೯೦ರಲ್ಲಿ ಸಾತನೂರು ಬಡಾವಣೆ ಹಾಗೂ ೨೦೦೨ರಲ್ಲಿ ವಿವೇಕಾನಂದನಗರ ಬಡಾವಣೆ ರಚಿಸಲಾಗಿದೆ. ಕಳೆದ ೨೩ ವರ್ಷಗಳಿಂದ ಪ್ರಾಧಿಕಾರದಿಂದ ಯಾವುದೇ ಬಡಾವಣೆಯನ್ನು ರಚಿಸಲು ಸಾಧ್ಯವಾಗಿಲ್ಲ. ನಿಸ್ತೇಜವಾಗಿರುವ ಪ್ರಾಧಿಕಾರವನ್ನು ಕ್ರಿಯಾಶೀಲಗೊಳಿಸುವ ನಿಟ್ಟಿನಲ್ಲಿ ಹಲವು ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ. ಪ್ರಾಧಿಕಾರದಿಂದ ಅತ್ಯಾಧುನಿಕ ರೀತಿಯ ಸುಂದರ ಬಡಾವಣೆ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ವಿತರಿಸಿ ಅವರ ವಿಶ್ವಾಸ-ನಂಬಿಕೆ ಗಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಮಂಡ್ಯಕ್ಕೆ ರಿಂಗ್ ರಸ್ತೆ ನಿರ್ಮಿಸುವ ಯೋಜನೆ ಹೊಂದಲಾಗಿದ್ದು, ೨೦ ವರ್ಷಗಳ ಹಿಂದೆ ರೂಪಿಸಿದ್ದ ಯೋಜನೆಯನ್ನು ಈಗ ಕಾರ್ಯಗತಗೊಳಿಸುವುದಕ್ಕೆ ಕಷ್ಟವಿರುವುದರಿಂದ ಅದರಿಂದ ಇನ್ನೂ ೨೦೦ ರಿಂದ ೩೦೦ ಮೀಟರ್ ದೂರದಿಂದ ರಸ್ತೆ ನಿರ್ಮಾಣ ಯೋಜನೆ ಸಂಬಂಧ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನೂ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸಚಿವರು-ಶಾಸಕರ ಸಹಕಾರದೊಂದಿಗೆ ಶೀಘ್ರಗತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.ವಿವೇಕಾನಂದನಗರ ಬಡಾವಣೆಯ ನಿವೇಶನಗಳ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಗಮನಸೆಳೆಯಲಾಗುವುದು. ಸಿಬಿಐ ತನಿಖೆಯಲ್ಲಿರುವ ನಿವೇಶನಗಳನ್ನು ಹೊರತುಪಡಿಸಿ ಉಳಿದ ನಿವೇಶನಗಳನ್ನು ಮಾರಾಟ ಮಾಡಲು, ಖಾತೆ ಮಾಡಲು, ಮನೆ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಲಾಗುವುದು. ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕ ಪಿ.ರವಿಕುಮಾರ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರ ಗಮನಕ್ಕೂ ಈ ವಿಷಯವನ್ನು ತರಲಾಗುವುದು. ಶೀಘ್ರ ಸಿಬಿಐ ತನಿಖೆ ಮುಗಿಸುವಂತೆಯೂ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.
ಮುಡಾಗೆ ಸರ್ಕಾರದಿಂದ ಯಾವುದೇ ಆರ್ಥಿಕ ಸಂಪನ್ಮೂಲ ದೊರಕುವುದಿಲ್ಲ. ಸ್ವತಃ ಪ್ರಾಧಿಕಾರವೇ ಆದಾಯ ಮೂಲವನ್ನು ಸೃಷ್ಟಿಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ. ವಿವೇಕಾನಂದ ನಗರ ಬಡಾವಣೆಯಲ್ಲೇ ಸೂಕ್ತ ಜಾಗವನ್ನು ಹುಡುಕಿ ಸಮುದಾಯ ಭವನ ನಿರ್ಮಾಣ ಮಾಡುವುದು, ಮಳಿಗೆಗಳನ್ನು ನಿರ್ಮಿಸುವುದರೊಂದಿಗೆ ಆದಾಯವನ್ನು ಸೃಷ್ಟಿಸಿಕೊಳ್ಳಬೇಕಿದೆ. ಅದಕ್ಕಾಗಿ ಸೂಕ್ತ ಜಾಗಗಳನ್ನು ಹುಡುಕುವಂತೆಯೂ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ವಿವೇಕಾನಂದನಗರ ಬಡಾವಣೆಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ೧೬.೪೬ ಕೋಟಿ ರು.ಗೆ ಸೀಮಿತಗೊಳಿಸಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈಗಾಗಲೇ ೮.೨೫ ಕೋಟಿ ರು. ಹಣವನ್ನು ೧೨.೪.೨೦೨೧ರಲ್ಲಿ ನೀಡಿದ್ದು, ಬಾಕಿ ೮.೨೩ ಕೋಟಿ ರು. ಹಣವನ್ನು ನೀರು ಸರಬರಾಜು, ಒಳಚರಂಡಿ ಮಂಡಳಿಗೆ ನೀಡಬೇಕಿದೆ. ಅದೇ ರೀತಿ ಕೆರೆ ಪುನರುಜ್ಜೀವನ ಶುಲ್ಕ ಸಂಗ್ರಹದಿಂದ ೧.೭೬ ಕೋಟಿ ರು. ಸಂಗ್ರಹವಾಗಿದ್ದು, ಅದರಿಂದ ಪ್ರಾಧಿಕಾರದ ವ್ಯಾಪ್ತಿಯ ೧.೭೩ ಕೋಟಿ ರು.ಗೆ ನೀರಾವರಿ ಇಲಾಖೆ ಮೂಲಕ ಡಿಪಿಆರ್ ತಯಾರಿಸಲಾಗಿದೆ. ಅವುಗಳ ಅನುಷ್ಠಾನಕ್ಕೂ ಕ್ರಮ ವಹಿಸುವುದಾಗಿ ಹೇಳಿದರು.
ಸಭೆಯಲ್ಲಿ ಮುಡಾ ಆಯುಕ್ತ ಪಿ.ಕೃಷ್ಣಕುಮಾರ್, ನಾಮ ನಿರ್ದೇಶಿತ ಸದಸ್ಯರಾದ ಕಾರ್ತಿಕ್, ಮಹೇಶ್, ಇದ್ರಿಷ್‌ಖಾನ್, ಕಮಲಾರಾಜು ಹಾಜರಿದ್ದರು.